

ಹುಬ್ಬಳ್ಳಿ: ಕರ್ನಾಟಕ ಉತ್ತರ ಭಾಗದ 13 ಜಿಲ್ಲೆಗಳು ಅಭಿವೃದ್ಧಿ ವಂಚಿತವಾಗಿದ್ದು, ರಾಜ್ಯ ಸರ್ಕಾರದ ತಾರತಮ್ಯ ನೀತಿ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ಪ್ರತ್ಯೇಕ ರಾಜ್ಯಕ್ಕಾಗಿ ಡಿ. 26ರಂದು ಬೆಳಗ್ಗೆ 10 ಗಂಟೆಗೆ ನಗರದ ಚನ್ನಮ್ಮ ವೃತ್ತದಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಸಂಚಾಲಕ ಕುಮಾರ ಹಕಾರಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲೂ ಸರಿಯಾಗಿ ಚರ್ಚೆಯಾಗುತ್ತಿಲ್ಲ. ಈ ಭಾಗದ ಜ್ವಲಂತ ಸಮಸ್ಯೆಗಳು ಹಾಗೇ ಉಳಿದಿವೆ. ಪ್ರತಿ ಬಜೆಟ್ ಸಂದರ್ಭದಲ್ಲಿ ಈ ಭಾಗಕ್ಕೆ ಪೂರಕ ಯೋಜನೆಗಳು ಇರುವುದಿಲ್ಲ ಎಂದು ದೂರಿದರು.
ನೀರಾವರಿ ಯೋಜನೆಗಳನ್ನು ಸರಿಯಾಗಿ ಜಾರಿ ಮಾಡುತ್ತಿಲ್ಲ. ಕೃಷ್ಣಾ, ತುಂಗಭದ್ರಾ ನದಿಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ. ಕಳಸಾ ಬಂಡೂರಿ, ಬೆಣ್ಣಿ ಹಳ್ಳ ಯೋಜನೆಗಳಿಗೆ ಮಹತ್ವ ನೀಡುತ್ತಿಲ್ಲ. ಈ ಭಾಗಕ್ಕೆ ಕೈಗಾರಿಕೆಗಳು ಬರುತ್ತಿಲ್ಲ. ಮೂಲ ಸೌಲಭ್ಯ ಅಭಿವೃದ್ಧಿಯಲ್ಲೂ ತಾರತಮ್ಯ ಎಸಗಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಭಾಗದಲ್ಲಿ ಸಾಕಷ್ಟು ಸಂಪನ್ಮೂಲ ಇದ್ದರೂ ಸಮರ್ಪಕ ಬಳಕೆಯಾಗುತ್ತಿಲ್ಲ. ಅಭಿವೃದ್ಧಿ ಪೂರಕ ಯೋಜನೆ ರೂಪಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ. 13 ಜಿಲ್ಲೆಗಳಲ್ಲಿಯೂ ಮುಂದಿನ ದಿನಗಳಲ್ಲಿ ಹೋರಾಟ ನಡೆಯಲಿದೆ. ಕನಿಷ್ಠ ಪಕ್ಷ ಪ್ರತ್ಯೇಕ ಬಜೆಟ್ ಮಂಡಿಸಬೇಕು. ಇಲ್ಲದಿದ್ದರೆ ಗಂಭೀರ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ವಿವಿಧ ಸಂಘಟನೆಗಳ ಪ್ರಮುಖರಾದ ಈರಣ್ಣ ಎಮ್ಮಿ, ಮಂಜುನಾಥ ಲೂತಿಮಠ, ಶ್ರೀಶೈಲ ಗಡದಿನ್ನಿ ಸುದ್ದಿಗೋಷ್ಠಿಯಲ್ಲಿದ್ದರು.