ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಸಾವು

Road accident
Published on

ಶಿವಮೊಗ್ಗ: ನಗರದಲ್ಲಿ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಪ್ರತಿಷ್ಠಿತ ಗಾರ್ಮೆಂಟ್ಸ್‌ನ ಸೀನಿಯರ್ ಕ್ವಾಲಿಟಿ ಮ್ಯಾನೇಜರ್ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಧಾರವಾಡದ ವಿಜಯ ಕುರ್ಲಿ (50) ಮತ್ತು ಭದ್ರಾವತಿ ತಾಲೂಕಿನ ಹುಣಸೆಕಟ್ಟೆ ಜಂಕ್ಷನ್ ನಿವಾಸಿ ನಿಶ್ಚಿತ್ (20) ಮೃತರು.

ಶನಿವಾರ ತಡರಾತ್ರಿ ಸಾಗರ ರಸ್ತೆಯ ಭಾರ್ಗವಿ ಪೆಟ್ರೋಲ್ ಬಂಕ್ ಎದುರು ನಿಂತಿದ್ದ ಖಾಸಗಿ ಬಸ್‌ಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಗಾರ್ಮೆಂಟ್ಸ್‌ನ ಸೀನಿಯರ್ ಕ್ವಾಲಿಟಿ ಮ್ಯಾನೇಜರ್ ವಿಜಯ್ ಕುರ್ಲಿ ಮೃತಪಟ್ಟಿದ್ದಾರೆ. ಕೆಲಸ ಮುಗಿಸಿ ವಿನೋಬನಗರದ ಸ್ನೇಹಿತನನ್ನು ಆತನ ಮನೆಗೆ ಬಿಟ್ಟು ಬರುವಾಗ ಅಪಘಾತ ಸಂಭವಿಸಿದೆ.

ಮಲವಗೊಪ್ಪದಲ್ಲಿರುವ ಗಾರ್ಮೆಂಟ್ಸ್‌ಗೆ ತೆರಳುವಾಗ ಚಾಲಕನ ಕಾರಿನ ನಿಯಂತ್ರಣ ತಪ್ಪಿ ಬಸ್‌ಗೆ ಗುದ್ದಿದೆ. ಕಾರಿನ ಮುಂಭಾಗ ನುಜ್ಜು ಗುಜ್ಜಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ವಿಜಯ ಕುರ್ಲಿ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಚಾಲಕ ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದು ಪಶ್ಚಿಮ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಶನಿವಾರ ರಾತ್ರಿ ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸವಾರ ನಿಶ್ಚಿತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಗರದ ಪುಟ್ಟಪ್ಪನ ಕ್ಯಾಂಪ್‌ನಲ್ಲಿರುವ ರೆಸಾರ್ಟ್‌ನಲ್ಲಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಪಾಸ್ ಹುಣಸೆಕಟ್ಟೆ ಜಂಕ್ಷನ್‌ನಲ್ಲಿರುವ ಮನೆಗೆ ಬೈಕ್‌ನಲ್ಲಿ ಹೋಗುವಾಗ ಅವಘಡ ಸಂಭವಿಸಿದೆ. ಪೈಂಟರ್ ಕೆಲಸ ಮಾಡಿಕೊಂಡಿದ್ದ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net