ಪ್ರತ್ಯೇಕ ಬಸ್‌ ಅಪಘಾತ ಏಳು ಜನರಿಗೆ ಗಾಯ

Published on

ಹಳಿಯಾಳ: ಹಳಿಯಾಳ ತಾಲೂಕಿನಲ್ಲಿ ಭಾನುವಾರ ಸಾಯಂಕಾಲ ನಡೆದ ಎರಡು ಪ್ರತ್ಯೇಕ ಬಸ್ ಅಪಘಾತದಲ್ಲಿ  7 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿರುವ ಘಟನೆ ನಡೆದಿದೆ.

ಹಳಿಯಾಳ ಕಲಘಟಗಿ ರಾಜ್ಯ ಹೆದ್ದಾರಿಯಲ್ಲಿ ಬೆಳವಟಗಿ ಗ್ರಾಮದ ಸಮೀಪ ಅತೀ ವೇಗವಾಗಿ ವಿರುದ್ದ ದಿಕ್ಕಿನಲ್ಲಿ ಬಂರ ಲಾರಿಯನ್ನು ತಪ್ಪಿಸಲು ಹೊದಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಕ್ಕದ ಗಟಾರದಲ್ಲಿ ಇಳಿದಿದ್ದು ಇಲ್ಲಿ ಬೆಳವಟಗಿ ಗ್ರಾಮದ ಮಹಿಳೆ ಇಂದ್ರಮ್ಮ ವಿಠ್ಠಲ ಮೇತ್ರಿ (40 ) ಇವಳ ಎಡಗೈ ಮುಂಗೈ ಮುಳೆ ಮುರಿತವಾಗಿದ್ದು, ಬಸ್ ನಲ್ಲಿದ್ದ  ಪರಶುರಾಮ ಮೇತ್ರಿ,  ಗಂಗವ್ವಾ ಪಿ ಮೇತ್ರಿ,   ಲಕ್ಷ್ಮೀ ತುಕಾರಾಮ ಮೇತ್ರಿ ಸೇರಿದಂತೆ ಒಟ್ಟೂ 6 ಜನರಿಗೆ ಗಾಯಗಳಾಗಿವೆ. 

ಇದೇ ಸಂದರ್ಭದಲ್ಲಿ ನಡೆದ ಮತ್ತೊಂದ ಬಸ್ ಅಪಘಾತದಲ್ಲಿ  ಹಳಿಯಾಳ ಬೆಳಗಾವಿ ರಾಜ್ಯ ಹೆದ್ದಾರಿಯ ತೇರಗಾಂವ ಗ್ರಾಮದ ಸಮೀಪ ಹಳಿಯಾಳದಿಂದ ಅಳ್ನಾವರಕ್ಕೆ ತೆರಳುತ್ತಿದ್ದ ಬಸ್ ಗೇರ್ ಬಾಕ್ಸ್ ಸೇರಿದಂತೆ ತಾಂತ್ರಿಕ ಸಮಸ್ಯೆ ಎದುರಾಗಿ ಬಸ್ ಚಾಲಕನ ನಿಯಂತ್ರಣಕ್ಕೆ ಬಾರದೆ ಸುಮಾರು 300 ಮೀಟರ್ ಗೂ ಹೆಚ್ಚು ಹಿಮ್ಮುಖವಾಗಿ ಚಲಿಸಿ ರಸ್ತೆ ಬದಿಯ ಗಟಾರದಲ್ಲಿ ಪಲ್ಟಿಯಾಗಿದೆ.

ಅದೃಷ್ಟವಶಾತ್ ಚಾಲಕನ ಸಮಯ ಪ್ರಜ್ಞೆಯಿಂದ ಆಗಬಹುದಾಗಿದ್ದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಇಲ್ಲಿ ನಾಲ್ಕೈದು ಜನರಿಗೆ ಗಾಯಗಳಾಗಿದ್ದು ತೇರಗಾಂವ ಗ್ರಾಮದ ರತ್ನಾ ರಾಜು ಗಾಯಕವಾಡ ಇವಳಿಗೆ ಆಂತರಿಕವಾಗಿ ಸ್ವಲ್ಪ ಗಂಭಿರ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ರವಾನಿಸಲಾಗಿದೆ.

ಘಟನಾ ಸ್ಥಳಕ್ಕೆ ಹಳಿಯಾಳ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಳಿಯಾಳ ಠಾಣೆಯಲ್ಲಿ  ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿವೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net