ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಶಿಕ್ಷಕರ ಅಮಾನತು

Published on

ಮಧುಗಿರಿ: ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಶಿಕ್ಷಕರನ್ನು ಬಿಇಒ ಕೆ.ಎನ್​.ಹನುಮಂತರಾಯಪ್ಪ ಅಮಾನತು ಮಾಡಿ ಮಂಗಳವಾರ ಆದೇಶಿಸಿದ್ದಾರೆ. ತಾಲೂಕಿನ ಐ.ಡಿ.ಹಳ್ಳಿ ಹೋಬಳಿಯ ಹಳೇ ಇಟಕಲೋಟಿ ಗ್ರಾಮದ ಸಹ ಶಿಕ್ಷಕ ಆರ್​.ವೆಂಕಟರವಣಪ್ಪ, ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ದೊಡ್ಡದಾಳವಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎ.ಆರ್​.ಸಂಜೀವಮೂರ್ತಿ, ಮಧುಗಿರಿ ಪಟ್ಟಣದ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಎಚ್​.ಎಸ್​.ಅನುಪಮಾ ಅಮಾನತುಗೊಂಡವರು.

ತಾಲೂಕಿನ ಐ.ಡಿ.ಹಳ್ಳಿ ಹೋಬಳಿಯ ಹಳೇ ಇಟಕಲೋಟಿ ಗ್ರಾಮದ ಸರ್ವೇ ನಂ.48ರಲ್ಲಿ 3 ಎಕರೆ 33 ಗುಂಟೆ ಜಮೀನಿನ ಭೂ ಮಂಜೂರಾತಿ ದಾಖಲಾತಿಗಳನ್ನು ತಿದ್ದಿ ನಕಲಿ ಸಾಗುವಳಿ ಪಡೆದ ಪ್ರಕರಣದ ಹಿನ್ನೆಲೆಯಲ್ಲಿ ಶಿಕ್ಷಕ ಆರ್​.ವೆಂಕಟಪ್ಪನ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿಗಳು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. ತಾಲೂಕಿನ ದೊಡ್ಡದಾಳವಟ್ಟ ಶಾಲೆಯ ಸಹ ಶಿಕ್ಷಕ ಎ.ಆರ್​.ಸಂಜೀವಮೂರ್ತಿ ಸರ್ಕಾರಿ ಶಾಲೆಯ ಮಕ್ಕಳಿಗೆ ಅಸುರಕ್ಷತೆಯ ಸ್ಪರ್ಶ ಮಾಡುತ್ತಾರೆ ಎಂದು ಮಕ್ಕಳ ಸಹಾಯವಾಣಿ- 1098ಕ್ಕೆ ಕರೆ ಮಾಡಲಾಗಿತ್ತು. ಮಕ್ಕಳ ಸಹಾಯವಾಣಿ ಕಚೇರಿಯ ಸಿಬ್ಬಂದಿ ಸಂಬಂಧಪಟ್ಟ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದಾಗ ಶಿಕ್ಷಕ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಹೆಣ್ಣು ಮಕ್ಕಳನ್ನು ಶೌಚಕ್ಕೂ ಬಿಡದೇ ಸತಾಯಿಸುವುದು, ಮಕ್ಕಳ ಕೈಯಲ್ಲಿ ಯಾವಾಗಲೂ ನೃತ್ಯ ಮಾಡಿಸುವುದು ಹಾಗೂ ಪಠ್ಯ ಕ್ರಮವನ್ನು ಸಕಾಲಕ್ಕೆ ಮುಗಿಸಿದೆ ಸರಿಯಾಗಿ ಪಾಠ ಮಾಡದೆ ಮಕ್ಕಳಿಗೆ ಅಸುರಕ್ಷತೆಯ ಸ್ಪರ್ಶ ಮಾಡುತ್ತಾರೆ ಎಂದು ಸಮಾಲೋಚನೆಯಲ್ಲಿ ಮಕ್ಕಳು ಆರೋಪಿಸಿದ್ದರಿಂದ ಶಿಕ್ಷಕನನ್ನು ಅಮಾನತು ಪಡಿಸಲಾಗಿದೆ.

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಎಚ್​.ಎಸ್​ಅನುಪಮಾ ಅವರು ಪಿಎಂಶ್ರೀ ಅನುದಾನ ಸರಿಯಾಗಿ ನಿರ್ವಹಿಸಿರುವುದಿಲ್ಲವೆಂದು ಹಾಗೂ ಶಾಲಾನುದಾನ ದುರ್ಬಳಕೆಯಾಗಿದ್ದು, ತಪಾಸಣೆಯಲ್ಲಿ 2023ರ ಸೆ. 12 ರಂದು 25000 ರೂ.ಗಳನ್ನು ಶಾಲೆಯ ಆಯಾ ಗೌರಿಬಾಯಿ ಇವರ ಹೆಸರಿನಲ್ಲಿ ಚೆಕ್​ ನೀಡಿ ಒಂದೇ ಬಾರಿ ನಗದೀಕರಿಸಿದ್ದಾರೆ. 2023-&24ನೇ ಸಾಲಿನಲ್ಲಿ ಪಿಎಂಶ್ರೀ ಅನುದಾನದಲ್ಲಿ 6.30 ಲಕ್ಷ ರೂ. ಬಿಡುಗಡೆಯಾಗಿದ್ದು, ಇದರಲ್ಲಿ ಮಾರ್ಚ್​-2024 ರ ಅಂತ್ಯಕ್ಕೆ 76,313 ರೂ.ರ್ಖಚಾಗಿರುತ್ತದೆ. ಇದರಲ್ಲಿ 18,750 ರೂ.ಸರ್ಮಪಕ ದಾಖಲೆ ಒದಗಿಸಿಲ್ಲ. ಪಿಎಂಶ್ರೀ ಅನುದಾನದಲ್ಲಿ ಡಿಜಿಟಲ್​ ಗ್ರಂಥಾಲಯಕ್ಕೆ 2,93,877 ರೂ.ಗಳನ್ನು ಖರ್ಚು ಮಾಡಿರುತ್ತಾರೆ. ಇದಕ್ಕೆ ಪೂರಕವಾಗಿ ಬಿಲ್​ ಇಲ್ಲ ಹಾಗೂ ಅದಕ್ಕೆ ಆದಾಯ ತೆರಿಗೆ ಕಟಾವಣೆ ಮಾಡಿರುವುದಿಲ್ಲ ಹಾಗೂ ಮತ್ತಿತ್ತರ ಕಾರಣಗಳಿಂದಾಗಿ ಮುಖ್ಯಶಿಕ್ಷಕಿಯನ್ನು ಅಮಾನತು ಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net