

ಮೈಸೂರು: ನಗರದ ಸರಸ್ವತಿಪುರಂ ಪೊಲೀಸ್ ಠಾಣೆ ಮತ್ತು ದೇವರಾಜ ಠಾಣೆ ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಕಳ್ಳರನ್ನು ಬಂಧಿಸಿದ್ದಾರೆ.
ಮೊದಲ ಪ್ರಕರಣದಲ್ಲಿ ಸರಸ್ವತಿಪುರಂ ಪೊಲೀಸರು ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ 18.9 ಲಕ್ಷ ರೂ. ಮೌಲ್ಯದ 240 ಗ್ರಾಂ ಚಿನ್ನ, 1 ಕೆಜಿ 146 ಗ್ರಾಂ ಬೆಳ್ಳಿ, 1 ಮಾರುತಿ ಕಾರನ್ನು ಜಪ್ತಿ ಮಾಡಿದ್ದಾರೆ.
ಡಿ.9ರಂದು ಒಬ್ಬ ಆರೋಪಿಯನ್ನು ಡಿ.23 ರಂದು ಇನ್ನೊಬ್ಬ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆ ಕಳವು ಪ್ರಕರಣ, ಚಿಂತಾಮಣಿ ನಗರ ಪೊಲೀಸ್ ಠಾಣೆಯ ವಾಹನ ಕಳವು ಪ್ರಕರಣಗಳ ಬಗ್ಗೆ ಬಾಯಿಬಿಟ್ಟರು.
ದರೋಡೆ, ದ್ವಿಚಕ್ರ ವಾಹನ ಕಳುವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ದೇವರಾಜ ಠಾಣಾ ಪೊಲೀಸರು, ಬಂಧಿತರಿಂದ 2.5 ಲಕ್ಷ ರೂ. ಮೌಲ್ಯದ 3 ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.
ಕಾವೇರಿ ಎಂಪೋರಿಯಂ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರಿಂದ 500 ರೂ. ಹಾಗೂ ಹೊಂಡಾ ಆಕ್ಟಿವಾ ಸ್ಕೂಟರ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದ ಬಗ್ಗೆ ದೂರು ದಾಖಲಾಗಿತ್ತು. ಆರೋಪಿಯನ್ನು ಡಿ.28ರಂದು ರೈಲ್ವೆ ನಿಲ್ದಾಣದ ಬಳಿಕ ವಶಕ್ಕೆ ಪಡೆದುಕೊಳ್ಳಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಪುರಭವನದ ಬಳಿ ಆರೋಪಿಯನ್ನು ವಶಕ್ಕೆ ಪಡೆದು ಲಕ್ಷ ರೂ. ಮೌಲ್ಯದ 2 ದ್ವಿಚಕ್ರ ವಾಹನ ವಶ ಪಡಿಸಿಕೊಳ್ಳಲಾಗಿದೆ.