ಪ್ರತ್ಯೇಕ ಚಿಮುಲ್ ರಚನೆ ಸನ್ನಿಹಿತ!

9CBP2(megadairy) (1)
Published on

ಚಿಕ್ಕಬಳ್ಳಾಪುರ : ಕೋಚಿಮುಲ್ ಒಕ್ಕೂಟವು ಇಬ್ಭಾಗವಾಗಿ ಕಾರ್ಯನಿರ್ವಹಿಸುವ ಕಾಲ ಸನ್ನಿಹಿತವಾಗಿದೆ. ಮೊದಲಿನಿಂದಲೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ಪ್ರತ್ಯೇಕಗೊಳಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿದ್ದು ಇದಕ್ಕೆ ಸಹಕಾರ ಸಚಿವರು ಹಸಿರು ನಿಶಾನೆ ತೋರಿದ್ದಾರೆ.

ಈಗಾಗಲೇ ಒಂದು ಹಂತದ ಮಾತುಕತೆ ಮುಗಿದಿದ್ದು, ಇದರ ನಡುವೆ ಎರಡ್ಮೂರು ವಾರದೊಳಗೆ ಸಂಬಂಧಪಟ್ಟ ಜನಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಅಂತಿಮ ಘೋಷಣೆ ಮಾಡಲಾಗುತ್ತದೆ ಎಂಬುದು ತಿಳಿದು ಬಂದಿದೆ. ದಶಕಗಳ ಬೇಡಿಕೆ ಹಿನ್ನೆಲೆಯಲ್ಲಿ ಕೋಲಾರದಿಂದ ಚಿಕ್ಕಬಳ್ಳಾಪುರವನ್ನು ಬೇರ್ಪಡಿಸಿ, 2007ರಲ್ಲಿ ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಲಾಯಿತು. ಇದರಿಂದ ಹೊಸ ಜಿಲ್ಲಾಡಳಿತ, ಜಿಪಂ ಅಸ್ತಿತ್ವಕ್ಕೆ ಬಂತು. ಆದರೆ, ಈಗಲೂ ಜಿಲ್ಲಾ ಸಹಕಾರ ಹಾಲು ಒಕ್ಕೂಟ, ಡಿಸಿಸಿ ಬ್ಯಾಂಕ್ ಕೋಲಾರ ಜಿಲ್ಲಾ ವ್ಯಾಪ್ತಿಯಲ್ಲಿದೆ. ಇದಕ್ಕೆ ಆಡಳಿತಾತ್ಮಕ ಮತ್ತು ಅಭಿವೃದ್ಧಿ ಹಿತದೃಷ್ಟಿಯಿಂದ ಈ ಎರಡನ್ನೂ ಪ್ರತ್ಯೇಕಗೊಳಿಸಬೇಕೆಂಬುದು ಈ ಭಾಗದ ಜನರ ಒತ್ತಾಯ. ಇನ್ನು 2016 ರಿಂದಲೂ ಒಕ್ಕೂಟ ರಚನೆ ಪ್ರಕ್ರಿಯೆಗಳು ಬಿರುಸುಗೊಂಡಿವೆ.

ಒಕ್ಕೂಟದ ಸಾಮಾನ್ಯ ಸಭೆಗಳಲ್ಲೂ ಇಬ್ಭಾಗಕ್ಕೆ ಹಲವು ಬಾರಿ ಒತ್ತಡ ಹೇರಲಾಗಿದೆ. ಇನ್ನು 2019 ನೇ ಸಾಲಿನ ಜನವರಿಯಲ್ಲಿ ಕೃಷಿ ಸಚಿವರಾಗಿದ್ದ ಎನ್.ಎಚ್.ಶಿವಶಂಕರರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಒಕ್ಕೂಟ ಪ್ರತ್ಯೇಕಗೊಳಿಸುವುದಕ್ಕೆ ಸರ್ವಾನುಮತದ ಒಲವು ವ್ಯಕ್ತವಾಗಿದೆ. ಆದರೆ, ಲೋಕಸಭೆ ಮತ್ತು ವಿಧಾನಸಭೆ, ಸ್ಥಳೀಯ ಆಡಳಿತ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಗಳಿಂದ ವಿಳಂಬವಾಯಿತು. ಇದರ ನಡುವೆ ಸಚಿವ ಡಾ ಕೆ.ಸುಧಾಕರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಲೆ ಒತ್ತಡ ಹೇರಿದ್ದು ಪ್ರತ್ಯೇಕ ಚಟುವಟಿಕೆಗೆ ವೇಗ ಹೆಚ್ಚಿಸಿದ್ದಾರೆ. ಕಳೆದ ಮಾ.5ರಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಕೆಎಂಎ್, ಒಕ್ಕೂಟದ ನಿರ್ದೇಶಕರನ್ನು ಒಳಗೊಂಡ ಸಭೆಯಲ್ಲೂ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಬಾಕ್ಸ್ ಎರಡನೇ ಹಂತದ ಸಭೆ ಮುಂದೂಡಿಕೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಪ್ರವಾಸ ಕೈಗೊಂಡು ಮಂಗಳವಾರ ಒಕ್ಕೂಟ ಪ್ರತ್ಯೇಕಗೊಳಿಸುವ ಚರ್ಚೆಯ ಎರಡನೇ ಹಂತದ ಸಭೆ ನಡೆಯಬೇಕಾಗಿತ್ತು. ಕೇಂದ್ರದಿಂದ ಹಿರಿಯ ಅಧಿಕಾರಿಗಳು ಆಗಮಿಸಿದ ಹಿನ್ನೆಲೆಯಲ್ಲಿ ಹಾಗೂ ಒಕ್ಕೂಟದ ಅಧಿಕಾರಿಗಳ ಗೈರಿನ ಸಮಸ್ಯೆಗೆ ಮುಂದೂಡಲಾಗಿದೆ.

ಎರಡು ವಾರದೊಳಗೆ ಪುನಃ ಸಭೆ ಕರೆದು, ವಾರದಲ್ಲಿ ತೀರ್ಮಾನ ಘೋಷಿಸುವ ಯೋಜನೆ ರೂಪಿಸಲಾಗಿದೆ. ಬಾಕ್ಸ್ ಪ್ರತ್ಯೇಕತೆಯ ಅನುಕೂಲ ಹಾಲು ಒಕ್ಕೂಟದ ಪ್ರತ್ಯೇಕತೆಯಿಂದ ಉತ್ಪಾದನೆ ಪ್ರಮಾಣ ಮತ್ತು ಗುಣಮಟ್ಟ ಹೆಚ್ಚಳ, ಸಮರ್ಪಕವಾಗಿ ಹೆಚ್ಚಿನ ನಿರ್ವಹಣೆ, ಒತ್ತಡ ಕಡಿಮೆ ಸೇರಿ ಆಡಳಿತಾತ್ಮಕ ಮತ್ತು ಅಭಿವೃದ್ಧಿ ಪರ ಅನುಕೂಲಗಳಾಗುತ್ತವೆ. ಚಿಕ್ಕಬಳ್ಳಾಪುರ ಒಕ್ಕೂಟವು ಪ್ರತ್ಯೇಕತೆಗೆ ಅರ್ಹ ಮಾನದಂಡಗಳನ್ನು ಹೊಂದಿದೆ ಎಂದು ಈ ಭಾಗದ ವ್ಯಾಪ್ತಿಯ ಒಕ್ಕೂಟದ ನಿರ್ದೇಶಕರ ಅಭಿಪ್ರಾಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net