

ಮಳವಳ್ಳಿ: ಕಳೆದ ಹತ್ತು ವರ್ಷಗಳಿಂದ ಪಕ್ಷದ ಹಿರಿಯ ನಾಯಕನಾಗಿ ಪಟ್ಟಣದಲ್ಲಿ ಅಧಿಕೃತ ಬಿಜೆಪಿ ಕಚೇರಿ ತೆರೆದು ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಆದರೆ ಇಲ್ಲಿನ ತಾಲೂಕು ಮಂಡಲ ಅಧ್ಯಕ್ಷ ಕೆಲವರನ್ನು ಸೇರಿಸಿಕೊಂಡು ಪ್ರತ್ಯೇಕ ಕಚೇರಿ ತೆರೆದು ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾನೆ ಎಂದು ಮಾಜಿ ಸಚಿವ ಬಿ.ಸೋಮಶೇಖರ್ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ಜನರಿಗೆ ಉತ್ತಮ ಆಡಳಿತ ನೀಡಬೇಕೆಂಬ ಸದುದ್ದೇಶದಿಂದ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುತ್ತಿದ್ದೇನೆ. ಆದರೆ ಮುನಿರಾಜು ಎಂಬಾತ ಕೆಲವರಿಗೆ ಹಣದ ಆಮಿಷ ನೀಡಿ ದಿಕ್ಕು ತಪ್ಪಿಸುತ್ತಿದ್ದಾರೆ. ಈ ಎಲ್ಲ ಬೆಳವಣಿಗೆ ಬಗ್ಗೆ ಪಕ್ಷದ ವರಿಷ್ಠರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ 50ಕ್ಕೂ ಹೆಚ್ಚು ಯುವಕರು ಬಿಜೆಪಿ ಸೇರ್ಪಡೆಯಾದರು. ಪುರಸಭೆ ಸದಸ್ಯ ರವಿ, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರೇಮಕುಮಾರಿ, ಹೋಬಳಿ ಶಕ್ತಿಕೇಂದ್ರಗಳ ಅಧ್ಯಕ್ಷರಾದ ಎಸ್.ರಾಜಣ್ಣ, ಶಿವಣ್ಣ, ಜಯರಾಮೇಗೌಡ, ಸಿದ್ದೇಗೌಡ, ಅನಿಲ್, ಕಾಂತರಾಜು, ರೈತ ಮೋರ್ಚಾ ತಾಲೂಕು ಅಧ್ಯಕ್ಷ ದೇವರಾಜು, ಭೂ ನ್ಯಾಯ ಮಂಡಳಿ ಸದಸ್ಯಪ್ರಸಾದ್, ಗ್ರಾಪಂ ಸದಸ್ಯ ಶಿವಕುಮಾರ್, ಟೌನ್ ಅಧ್ಯಕ್ಷ ಮಹೇಶ್, ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜು ಇತರರಿದ್ದರು.