

ರಾಜೇಂದ್ರ ಶಿಂಗನಮನೆ ಶಿರಸಿ
ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ- ಆಪರೇಟಿವ್ (ಕೆಡಿಸಿಸಿ) ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ನ. 11ರಂದು ನಿಗದಿಯಾಗಿದೆ. ಈ ಸಮಯದಲ್ಲಿಯೇ ಹೆಚ್ಚು ಸದಸ್ಯ ಬಲದ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಪ್ರತಿನಿಧಿತ್ವಕ್ಕೆ ಪ್ರತ್ಯೇಕ ನಿರ್ದೇಶಕ ಸ್ಥಾನದ ಕೂಗು ಕೇಳಿಬಂದಿದೆ.
16 ವಿವಿಧ ಆಡಳಿತ ನಿರ್ದೇಶಕರ ಹುದ್ದೆಗೆ ಆಯಾ ಕೇತ್ರದ ಸಂಘ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಸದಸ್ಯರ ಪಾಲಿನ ಮತಗಳನ್ನು ಚಲಾಯಿಸಲಿದ್ದಾರೆ. ಆದರೆ, ಈಗಾಗಲೇ ದಕ್ಷಿಣ ಕನ್ನಡ, ಹಾಸನ, ಉಡುಪಿ ಜಿಲ್ಲೆಗಳ ಡಿಸಿಸಿ ಬ್ಯಾಂಕ್ಗೆ ಇದ್ದಂತೆ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಪ್ರತ್ಯೇಕ ನಿರ್ದೇಶಕ ಸ್ಥಾನದ ಅಸ್ತಿತ್ವ ಉತ್ತರ ಕನ್ನಡದಲ್ಲಿ ಯಾಕಿಲ್ಲ ಎಂಬ ಪ್ರಶ್ನೆ ಎದ್ದಿದೆ.
ಆದ್ಯತೆ ನೀಡುತ್ತಿಲ್ಲ: ಚುನಾವಣೆಯಲ್ಲಿ 11 ತಾಲೂಕಿನ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳಿಂದ ಹಾಗೂ ಐದು ವಿವಿಧ ಕ್ಷೇತ್ರಗಳ ಪ್ರತಿನಿಧಿಗಳ ಆಯ್ಕೆ ನಡೆಯಲಿದೆ. ಅಡಕೆ, ಕಾಳು ಮೆಣಸು ಸೇರಿ ತೋಟಗಾರಿಕೆ ಬೆಳೆಗಳ ಜಿಲ್ಲೆಯಾದ್ದರಿಂದ ಎಲ್ಲ ತಾಲೂಕಿನ ಪ್ರಾತಿನಿಧ್ಯ ಸಿಕ್ಕ ಬಳಿಕ ಜೇನು ಹಾಗೂ ಔದ್ಯೋಗಿಕ ಸಹಕಾರಿ ಸಂಘ, ಅರ್ಬನ್ ಸೌಹಾರ್ದ ಪ್ರತಿನಿಧಿ, ಸಂಸ್ಕರಣ ಘಟಕಗಳ ಪ್ರತಿನಿಧಿ, ಮಾರ್ಕೆಟಿಂಗ್ ಸೊಸೈಟಿಗಳಿಗೆ ತಲಾ ಒಂದು ಮತ್ತು ಹಾಲು ಸೊಸೈಟಿ, ಮೀನುಗಾರಿಕೆ ಹಾಗೂ ಇತರೆ ಸಹಕಾರಿ ಸಂಘಗಳೂ ಸೇರಿ ಒಂದು ಪ್ರಾತಿನಿಧ್ಯವಿದೆ. ಈ ಪ್ರಾತಿನಿಧ್ಯದಿಂದ ಹಾಲು ಉತ್ಪಾದಕ ಸಹಕಾರಿ ಸಂಘಗಳಿಗೆ ಆದ್ಯತೆ ನೀಡಲಾಗುತ್ತಿಲ್ಲ ಎಂದು ಹಲವು ಸಂಘಗಳ ಪ್ರಮುಖರು ಆರೋಪಿಸುತ್ತಿದ್ದಾರೆ.
194 ಸಂಘಕ್ಕಿಲ್ಲ ಹಕ್ಕು: ಜಿಲ್ಲೆಯಲ್ಲಿನ ಹಾಲು ಸಂಘಗಳ ಮೂಲಕ 8800ಕ್ಕೂ ಅಧಿಕ ಹೈನುಗಾರರು ನಿತ್ಯವೂ 47 ಸಾವಿರ ಲೀಟರ್ ಸಂಘಗಳಿಗೆ ಹಾಕುತ್ತಿದ್ದಾರೆ. ತಿಂಗಳಿಗೆ ಹೈನುತ್ಪಾದಕರು ಮಾರಾಟ ಮಾಡಿದ ಹಾಲಿನ ಮೊತ್ತ ಅಂದಾಜು 3.35 ಕೋಟಿ ರೂ. ಆಗುತ್ತದೆ. ಹಾಲು ಮಾರಾಟದಿಂದ 3.75 ಕೋಟಿ ರೂ. ಚಲಾವಣೆ ಆಗುತ್ತದೆ. 3.5 ಕೋಟಿ ರೂ. ಪಶು ಆಹಾರ ವಿತರಣೆ ಮಾಡಲಾಗುತ್ತಿದೆ. ಸರ್ಕಾರವು ಪ್ರತಿ ಲೀ. ಹಾಲಿಗೆ 5 ರೂ. ಪ್ರೋತ್ಸಾಹಧನ ಕೂಡ ನೀಡುತ್ತದೆ. ಇಷ್ಟೊಂದು ದೊಡ್ಡ ವ್ಯವಹಾರ ಇರುವ ಕ್ಷೇತ್ರದ ಬಹುತೇಕ ವ್ಯವಹಾರ ಕೆಡಿಸಿಸಿ ಬ್ಯಾಂಕ್ ಮೂಲಕವೇ ನಡೆಯುತ್ತಿದೆ. ಆದರೂ ಈ ಕ್ಷೇತ್ರವನ್ನು ಗಣನೆಗೆ ತೆಗೆದುಕೊಂಡಿಲ್ಲ.
194 ಸಂಘಗಳಿಗಿಲ್ಲ ಮತದಾನದ ಹಕ್ಕು
ಜಿಲ್ಲೆಯಲ್ಲಿ 248 ಹಾಲು ಉತ್ಪಾದಕರ ಸಹಕಾರಿ ಸಂಘಗಳಿದ್ದರೂ ಚುನಾವಣೆಯಲ್ಲಿ ಕೇವಲ 54 ಸಂಘಗಳಿಗೆ ಮತ ಚಲಾವಣೆಯ ಮಾನ್ಯತೆ ಇದೆ. ಐನೂರು ಮುಖ ಬೆಲೆಯ ಷೇರಿನಿಂದ ಸಾವಿರ ರೂ. ಮುಖ ಬೆಲೆಯ ಷೇರಿಗೆ ಏರಿಸದೇ ಇರುವುದರಿಂದ ಹಾಗೂ ಮೂರು ನಿರಂತರ ಸರ್ವ ಸಾಧಾರಣ ಸಭೆಗೆ ಸಂಘಗಳ ಪ್ರತಿನಿಧಿಗಳು ಪಾಲ್ಗೊಳ್ಳದ ಕಾರಣ ನೀಡಿ ಉಳಿದ 194 ಸಂಘಗಳಿಗೆ ಮತದಾನದ ಹಕ್ಕು ನೀಡಲಾಗಿಲ್ಲ. ಇದರಿಂದ ಸಂಘಗಳ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ ಎಂಬುದು ಕೂಡ ಹಾಲು ಸಂಘಗಳ ಮುಖ್ಯಸ್ಥರ ಅಭಿಪ್ರಾಯವಾಗಿದೆ.
ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕ್ಷೇತ್ರಕ್ಕೆ ಕೆಡಿಸಿಸಿ ನಿರ್ದೇಶಕ ವಲಯದಲ್ಲಿ ಪ್ರಾತಿನಿಧ್ಯ ಕೊಡಬೇಕು ಎಂಬ ಕಾರಣಕ್ಕೆ ಕಳೆದ ಮೂರು ವರ್ಷಗಳಿಂದ ಸರ್ವ ಸಾಧಾರಣ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಹೈನುಗಾರರ ಹೊರತಾಗಿನವರು ಈ ಬಗ್ಗೆ ದನಿಗೂಡಿಸಿದ್ದರೂ ಈವರೆಗೆ ಮಾನ್ಯತೆ ಸಿಕ್ಕಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿದ್ದ ಸಂಘಗಳ ಪ್ರಾತಿನಿಧಿಕ ಸ್ಥಾನ 15-20 ಮತಗಳಿಗೆ ಕುಸಿದರೂ ಹಾಲು ಉತ್ಪಾದಕ ಸಹಕಾರಿ ಸಂಘಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಬ್ಯಾಂಕ್ ನಿಯಮದಲ್ಲಿ ಬದಲಾವಣೆ ತಂದು ಹಾಲು ಉತ್ಪಾದಕರ ಸಹಕಾರಿ ಸಂಘಗಳ ಪ್ರತ್ಯೇಕ ನಿರ್ದೇಶಕ ಸ್ಥಾನ ಅಸ್ತಿತ್ವಕ್ಕೆ ತರಬೇಕು.-ನರಸಿಂಹ ಭಟ್ಟ ಬಾವಿಕೈ ಹಾಲು ಉತ್ಪಾದಕರ ಸಹಕಾರ ಸಂಘಟದ ಅಧ್ಯಕ್ಷಬ್ಯಾಂಕ್ನ ಬೈಲಾ ರಚನೆಯಾದಾಗಲೇ ನಿರ್ದೇಶಕರ ಸ್ಥಾನಗಳ ಹಂಚಿಕೆ ಆಗಿದೆ. ಹಾಲು ಉತ್ಪಾದಕ ಸಹಕಾರಿ ಸಂಘಗಳನ್ನೂ ಸೇರಿಸಿಕೊಂಡು ಒಂದು ನಿರ್ದೇಶಕ ಸ್ಥಾನ ನೀಡಲಾಗಿದೆ. ಪ್ರಸ್ತುತ ಪ್ರತ್ಯೇಕ ನಿರ್ದೇಶಕತ್ವಕ್ಕಾಗಿ ಬೈಲಾ ಬದಲಾವಣೆಗೆ ಅವಕಾಶವಿಲ್ಲ.-ಎಸ್.ಎಲ್. ಘೊಟ್ನೆಕರ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ