

ಆರ್.ಕೃಷ್ಣ ಮೈಸೂರು
ನಗರದ ಪ್ರತಿಷ್ಠಿತ ಕರೆಗಳಲ್ಲಿ ಒಂದಾದ ಹೆಬ್ಬಾಳು ಕೆರೆಯನ್ನು ಕೋಟ್ಯಂತರ ರೂ. ವೆಚ್ಚದಲ್ಲಿ ಶುದ್ಧೀಕರಿಸಿದರೂ ಮತ್ತೆ ಕಲುಷಿತಗೊಂಡು ಪ್ಲಾಸ್ಟಿಕ್‌ಮಯವಾಗಿದೆ. ಚರಂಡಿ ಜತೆಗೆ ಸುತ್ತ ಮುತ್ತಲಿನ ರಸಾಯನಿಕಯುಕ್ತ ನೀರಿನಿಂದ ಮೀನುಗಳ ಮಾರಣಹೋಮವೇ ನಡೆದರೂ ಕೆರೆಗೆ ಸೇರುತ್ತಿರುವ ತ್ಯಾಜ್ಯಕ್ಕೆ ತಡೆ ಬಿದ್ದಿಲ್ಲ. ಇದರಿಂದ ಶುದ್ಧೀಕರಣಗೊಂಡ ಎರಡು ವರ್ಷ ಕಳೆಯುವುದರೊಳಗೆ ಕೆರೆ ಮತ್ತೆ ಮಲಿನಗೊಂಡಿದೆ.
ಕಾರ್ಖಾನೆಗಳು ಹಾಗೂ ವಿವಿಧ ಬಡಾವಣೆಗಳಿಂದ ಹರಿದು ಬರುವ ಕಲುಷಿತ ನೀರು, ಕೆರೆ ಸೇರುವ ಸ್ಥಳದಲ್ಲಿ ರಾಶಿ ಕಸ ಬಿದ್ದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ತೆರವುಗೊಳಿಸಲು ಮೀನಮೇಷ ಎಣಿಸುತ್ತಿದ್ದಾರೆ. ಸತ್ತ ಮೀನುಗಳನಷ್ಟೇ ತೆರವುಗೊಳಿಸಿದ್ದ ಹೂಟಗಳ್ಳಿ ನಗರಸಭೆ ಸಿಬ್ಬಂದಿ ಕಣ್ಣು, ಕರೆಯಲ್ಲಿ ರಾಶಿ ಕಸ ಬಿದ್ದಿದ್ದರೂ ಸಂಬಂಧವೇ ಇಲ್ಲದಂತೆ ನಿರ್ಲಕ್ಷೃ ವಹಿಸಿದ್ದಾರೆ.
ಪ್ರತಿಷ್ಠಿತ ಇನ್‌ಫೋಸಿಸ್ ಸಂಸ್ಥೆಯಿಂದ ಅಭಿವೃದ್ಧಿಗೊಂಡ ಹೆಬ್ಬಾಳು ಕೆರೆಗೆ ಈಗ ಎರಡು ಕಡೆ ರಸಾಯನಿಕಯುಕ್ತ ಕಲುಷಿತ ನೀರು ಸೇರುತ್ತಿದೆ. ಹೆಬ್ಬಾಳು, ಲೋಕನಾಯಕನಗರ, ವಿಜಯನಗರದ ಇನ್ನಿತರ ಸುತ್ತಮುತ್ತಲಿನ ಬಡಾವಣೆಗಳಿಂದ ಹರಿದು ಬರುವ ಕಲುಷಿತ ನೀರಿನ ಮಾರ್ಗದಲ್ಲಿ ರಾಶಿ ಕಸ ಬಿದ್ದಿದ್ದು, ದುರ್ವಾಸನೆ ಬೀರುತ್ತಿದೆ.
ವಾಯುವಿಹಾರಿಗಳ ನೆಚ್ಚಿನ ತಾಣವಾದ ಹೆಬ್ಬಾಳು ಕೆರೆಯ ವಾತಾವರಣ ಈಗ ಸಂಪೂರ್ಣ ಕಲುಷಿತಗೊಂಡಿದೆ. ಹಲವು ಬಾರಿ ತ್ಯಾಜ್ಯ ತೆರವು ಮಾಡುವಂತೆ ನಾಗರಿಕರು ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸುಮಾರು 18 ಕೋಟಿ ರೂ. ವೆಚ್ಚದಲ್ಲಿ ಕೆರೆಯ ಹೂಳು ತೆಗೆಸಿ ಸುತ್ತಲೂ ವಾಕ್‌ಪಾತ್ ನಿರ್ಮಿಸಿ ಅಭಿವೃದ್ಧಿಗೊಳಿಸಲಾಗಿತ್ತು. ಸುಮಾರು ಮೂರು ಎಕರೆ ಪ್ರದೇಶದಲ್ಲಿ ತ್ಯಾಜ್ಯ ಸಂಸ್ಕರಣ ಘಟಕ(ಎಸ್‌ಟಿಪಿ) ನಿರ್ಮಿಸಿ ಕೊಳಚೆ ನೀರನ್ನು ಶುದ್ಧೀಕರಿಸಿ ಕೆರೆಗೆ ಬಿಡಲಾಗಿತ್ತು. ಕೆರೆಯ ಸುತ್ತ ತಂತಿ ಬೇಲಿ ನಿರ್ಮಾಣ, ದಿಂಡು ನಿರ್ಮಾಣ, ಬೀದಿದೀಪ ಅಳವಡಿಕೆ, ಕೆರೆ ಸುತ್ತಲಿನ ರಸ್ತೆ ನಿರ್ಮಾಣ ಸೇರಿ ಹಲವು ಕಾಮಗಾರಿಯೂ ನಡೆದಿದೆ. ಕಾಮಗಾರಿ ನಡೆದ ಆರಂಭದ ವರ್ಷದಲ್ಲಿ ಮಳೆ ನೀರು ಸರಾಗವಾಗಿ ಕೆರೆ ಸೇರಿದ್ದರಿಂದ ಕೆರೆ ಸೌಂದರ್ಯ ಮತ್ತಷ್ಟು ಹೆಚ್ಚಿ ಜನರ ಆಕರ್ಷಣೀಯ ಕೇಂದ್ರವಾಗಿತ್ತು.
ನಂತರದಲ್ಲಿ ನಿರ್ವಹಣೆ ಇಲ್ಲದ ಕಾರಣ ಈಗ ಕೆರೆಗೆ ಕೊಳಚೆ ನೀರು ಹರಿದು ಬರುತ್ತಿದೆ. ಕೊಳೆಚೆ ನೀರಿನೊಂದಿಗೆ ಮದ್ಯ ಹಾಗೂ ನೀರಿನ ಪ್ಲಾಸ್ಟಿಕ್ ಬಾಟಲಿಗಳು ಕೆರೆಯನ್ನು ಸೇರಿದ್ದು, ಸುಂದವಾಗಿ ಕಾಣುತ್ತಿದ್ದ ಕೆರೆ ಈಗ ಕೊಚ್ಚೆ ಗುಂಡಿಯಂತಾಗಿದೆ.
ಹೆಬ್ಬಾಳು ಸುತ್ತಮುತ್ತಲಿನ ಘನ ತ್ಯಾಜ್ಯ, ಡೆಬ್ರಿಸ್‌ಗಳನ್ನು ತಂದು ಕೆರೆಗೆ ಸುರಿಯುವುದು ಒಂದೆಡೆಯಾದರೆ, ಮತ್ತೊಂದೆಡೆ ಮಳೆ ನೀರು ಹರಿಯುವ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಮಳೆ ನೀರು ಕೆರೆಗೆ ಬರದಂತೆ ತಡೆಯಲಾಗಿದೆ. ಹೀಗಾಗಿ, ಕೊಳಚೆ ನೀರು ಚರಂಡಿಗಳ ಮೂಲಕ ಕೆರೆ ಸೇರುತ್ತಿದೆ.
ಕೆರೆಯ ಸುತ್ತಮುತ್ತ ಒತ್ತುವರಿ:
ಹೆಬ್ಬಾಳು ಸರ್ವೆ ಸಂಖ್ಯೆ 104ರಲ್ಲಿ ಬರುವ ಹೆಬ್ಬಾಳು ಕೆರೆಯ ದಾಖಲೆಯಲ್ಲಿ 48 ಎಕರೆ ಪ್ರದೇಶವಿದ್ದರೂ ಒತ್ತುವರಿ ಮತ್ತು ವ್ಯಾಜ್ಯವಿರುವ ಪ್ರದೇಶವನ್ನು ಹೊರತುಪಡಿಸಿ, 34.31 ಎಕರೆ ಪ್ರದೇಶ ಇದೆ.
ಕೆರೆಗೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್ ನೀಡಿರುವ ಆದೇಶದನ್ವಯ, ಕೆರೆ ಸುತ್ತಮುತ್ತಲಿನ 75 ಮೀಟರ್ ಪ್ರದೇಶವನ್ನು ಹಸಿರು ವಲಯ ಎಂದು ಘೋಷಿಸಲಾಗಿದೆ. ಘೋಷಿತ ಪ್ರದೇಶದ ಎಲ್ಲ ಒತ್ತುವರಿಯನ್ನು ತೆರವುಗೊಳಿಸಲೇಬೇಕು. ಆದರೆ ಕೆರೆಗೆ ಹೊಂದಿಕೊಂಡಂತೆಯೇ ಪಟಾಕಿ ಕಾರ್ಖಾನೆ ಸೇರಿದಂತೆ ರಾಸಾಯನಿಕ ಕೈಗಾರಿಕೆಗಳು ಈಗಲೂ ಕಾರ್ಯ ನಿರ್ವಹಿಸುತ್ತಿವೆ. ಇತ್ತೀಚೆಗೆ ಪಟಾಕಿ ಗೋದಾಮಿನಲ್ಲಿ ಇರಿಸಿದ್ದ ಭಾರಿ ಪ್ರಮಾಣದ ಪಟಾಕಿ ಸಿಡಿದು ಕೆರೆ ಒಳಗೂ ಬಿದ್ದಿತ್ತು. ಅದೃಷ್ಟವಶಾತ್ ಯಾವುದೇ ಜೀವಹಾನಿ ಆಗದಿದ್ದರಿಂದ ಪ್ರಕರಣ ತಣ್ಣಗಾಗಿದೆ. ಪಟಾಕಿ ಕಾರ್ಖಾನೆಯಿಂದ ರಾಸಾಯನಿಕ ನೇರ ಹೆಬ್ಬಾಳು ಕೆರೆಯನ್ನು ಸೇರುತ್ತಿದೆ.
ನಡೆಯದ ಎಚ್ಚರಿಕೆ ಕ್ರಮ:
ಕೆರೆಗೆ ಸೇರಿದ ಘೋಷಿತ ಹಸಿರು ವಲಯ ಜಾಗವನ್ನು ಕೆಐಎಡಿಬಿ ಹಂಚಿಕೆ ಮಾಡಿರುವ ಹಾಗೂ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿರುವ ದೂರುಗಳಿವೆ. ಹಸಿರು ವಲಯದಲ್ಲಿ ಯಾವುದೇ ಕಟ್ಟಡ, ಒತ್ತುವರಿ ಇದ್ದರೂ ಅದನ್ನು ಮುಲಾಜಿಲ್ಲದೆ, ತೆರೆವುಗೊಳಿಸಲಾಗುವುದು ಎಂದು ಹಿಂದಿನ ಜಿಲ್ಲಾಧಿಕಾರಿ ಡಿ.ರಂದೀಪ್ ಎಚ್ಚರಿಕೆ ನೀಡಿದ್ದರು. ಆದರೆ ಕೆಲವು ಭಾಗವನ್ನು ಮಾತ್ರ ತೆರವುಗೊಳಿಸಿ ಕೆರೆಯ ನಿಜವಾದ ಬಫರ್ ವಲಯವನ್ನು ಹಾಗೆಯೇ ಬಿಡಲಾಗಿದೆ. ಇದರಿಂದ ಕೆರೆಯನ್ನು ಅಭಿವೃದ್ಧಿಪಡಿಸಿ ಸುಂದರಗೊಳಿಸಬೇಕು ಎನ್ನುವ ಚಿಂತನೆ ಹಾಗೆಯೇ ಉಳಿದಿದೆ.
ಸಂಸ್ಕರಿಸಿದರೂ ಪ್ರಯೋಜನವಿಲ್ಲ
ಕೆರೆಯ ನಿಜವಾದ ಜಾಗವನ್ನು ಗುರುತಿಸಿ ಸುತ್ತಲಿನ ಒತ್ತುವರಿ ತೆರವುಗೊಳಿಸಬೇಕು. ಕೆರೆ ನೀರು ಸಂಸ್ಕರಣೆಗೆ ಎಸ್‌ಟಿಪಿ ಘಟಕ ಅಳವಡಿಸಿದ್ದರೂ ಮಳೆ ನೀರು ಸರಾಗವಾಗಿ ಹರಿದು ಕೆರೆ ಸೇರದಿರುವುದರಿಂದ ಎಷ್ಟೇ ಸಂಸ್ಕರಣೆ ಮಾಡಿದರೂ ಪ್ರಯೋಜನವಿಲ್ಲ. ಒಳಚರಂಡಿ ನೀರನ್ನು ನೇರ ರಾಜಕಾಲುವೆಗೆ ಬಿಡಲಾಗಿದೆ. ರಾಜಕಾಲುವೆಯೂ ಒತ್ತುವರಿ ಅಗಿದೆ.
ಸುರೇಶ್‌ಕುಮಾರ್ ಜೈನ್ ಕಾರ್ಯದರ್ಶಿ, ಮೈಸೂರು ಕೈಗಾರಿಕೆಗಳ ಸಂಘ
ಜನರ ಸಹಕರಿಸಬೇಕು
ಕೆರೆಗೆ ಮಳೆ ನೀರು ಸರಾಗವಾಗಿ ಹರಿದು ಹೋಗುವ ಮಾರ್ಗವೂ ಒತ್ತುವರಿ ಆಗಿದೆ. ಹೀಗಾಗಿ ಸಂಸ್ಕರಿಸಿದ ನೀರು ಕೆರೆ ಸೇರುತ್ತಿಲ್ಲ. ಚರಂಡಿ ನೀರನ್ನು ನೇರವಾಗಿ ಮಳೆ ನೀರು ಕಾಲುವೆಗೆ ಜನರು ಬಿಡುತ್ತಿದ್ದು, ಇದರ ಬಗ್ಗೆ ನಗರಪಾಲಿಕೆ, ನಗರಸಭೆ ಸೇರಿದಂತೆ ಸ್ಥಳೀಯ ಆಡಳಿತ ಸಹಕಾರ ನೀಡಿದರೆ ಕೆರೆ ಪರಿಸರ ಉಳಿಸಬಹುದು.
ಹೆಸರು ಹೇಳಲಿಚ್ಛಿಸದ ಅಧಿಕಾರಿ
ರಾಜ್ಯ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ