

ರಾಯಚೂರು: ಪ್ರಸ್ತುತ ದಿನಮಾನದಲ್ಲಿ ಸ್ವಂತ ಲಾಭಕ್ಕಾಗಿ ಸಮಾಜ ಸೇವೆ ಹೆಸರಿನಲ್ಲಿ ಕೆಲಸ ಮಾಡುವವರು ಹೆಚ್ಚಾಗಿದ್ದು, ಪ್ರತಿಲಾಕ್ಷೆಯಿಲ್ಲದೆ ಸೇವೆ ಮಾಡುವವರ ಸಂಖ್ಯೆ ವಿರಳವಾಗಿದೆ ಎಂದು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸ್ಥಳೀಯ ವೀರಶೈವ ಕಲ್ಯಾಣ ಮಂಟಪದಲ್ಲಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಲಾಂ ಹೆಸರಿನಲ್ಲಿ ತಂಡ ಕಟ್ಟಿಕೊಂಡು ನಿಸ್ವಾರ್ಥ ಸೇವೆ ಮಾಡುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಜೀವನ ಸಾಕಾರಗೊಳ್ಳಲು ಸಮಾಜಕ್ಕಾಗಿ ಕೆಲಸ ಮಾಡಬೇಕು. ತನು, ಮನ, ಧನದಿಂದ ಲಾಪೇಕ್ಷೆಯಿಲ್ಲದೆ ಕೆಲಸ ಮಾಡಿದಾಗ ಮಾತ್ರ ಸೇವೆಗೆ ಅರ್ಥ ಬರಲಿದೆ. ರಾಷ್ಟ್ರಪತಿಗಳಾಗಿದ್ದ ಅಬ್ದುಲ್ ಕಲಾಂ ತಮ್ಮ ನಿಸ್ವಾರ್ಥ ಸೇವೆ ಮೂಲಕ ಹೆಸರುವಾಸಿಯಾಗಿದ್ದು, ಅವರ ನಿಸ್ವಾರ್ಥ ಸೇವೆಯಿಂದಾಗಿ ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ಹೇಳಿದರು.
ಬ್ರಹ್ಮಕುಮಾರಿ ಈಶ್ವರಿಯ ಮಹಾವಿದ್ಯಾಲಯದ ಮುಖ್ಯಸ್ಥೆ ಸ್ಮೀತಾ ಅಕ್ಕಾ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಜನರು ಎಲೆಮರೆ ಕಾಯಿಯಂತೆ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಅಂತವರನ್ನು ಗುರುತಿಸಿ ಅವರನ್ನು ಗೌರವಿಸುವ ಕೆಲಸ ಮಾಡುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದವರನ್ನು ಸನ್ಮಾನಿಸಿ, ಗೌರವಿಸಲಾಯಿತು. ನಗರಸಭೆ ಪ್ರಭಾರಿ ಪೌರಾಯುಕ್ತ ಮಹೆಬೂಬ್ ಜಿಲಾನಿ, ಸಾಹಿತಿ ವೀರಹನುಮಾನ, ಉಪನ್ಯಾಸಕ ರಮೇಶ ಬಲ್ಲಿದ್, ಸಂಸ್ಥೆ ಅಧ್ಯಕ್ಷ ವಿಶ್ವನಾಥ ರೆಡ್ಡಿ, ಪದಾಕಾರಿಗಳಾದ ಪ್ರಾಣೇಶ, ನರಸಪ್ಪ, ದುಳ್ಳಯ್ಯ ಉಪಸ್ಥಿತರಿದ್ದರು.