ಪ್ರತಿಯೊಬ್ಬರೂ ಸಂತೋಷವಾಗಿ ಬಾಳುವುದೇ ಸಂವಿಧಾನದ ಆಶಯ

24 ckm 1
ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಕರ್ನಾಟಕ ಲೋಕಾಯುಕ್ತದಿಂದ ಬುಧವಾರ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸ್ವೀಕಾರ ಹಾಗೂ ವಿಚಾರಣೆ ಸಭೆಯನ್ನು ಉಪ ಲೋಕಯುಕ್ತ ಕೆ.ಎನ್.ಫಣೀಂದ್ರ ಉದ್ಘಾಟಿಸಿದರು. ಕಿರಣ್ ಎಂ.ಪಾಟೀಲ್, ಪೃಥ್ವಿರಾಜ್ ವರ್ಣೀಕರ್, ಶಿವಾಜಿ ಅನಂತ ನಾಲ್ಪಾಡೆ, ವಿ.ಹನುಮಂತಪ್ಪ, ಮೀನಾ ನಾಗರಾಜ್, ಎಚ್.ಎಸ್.ಕೀರ್ತನಾ, ಡಾ.ವಿಕ್ರಮ ಅಮಟೆ ಉಪಸ್ಥಿತರಿದ್ದರು.
Published on

ಚಿಕ್ಕಮಗಳೂರು: ಸಂವಿಧಾನದ ಆಶಯದಂತೆ ಜನಸಾಮಾನ್ಯರಿಗೆ ನ್ಯಾಯಯುತವಾದ ಜೀವನವನ್ನು ಒದಗಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ ಎಂದು ಉಪಲೋಕಾಯುಕ್ತರಾದ ಕೆ.ಎನ್.ಫಣೀಂದ್ರ ತಿಳಿಸಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಕರ್ನಾಟಕ ಲೋಕಾಯುಕ್ತದಿಂದ ಬುಧವಾರ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸ್ವೀಕಾರ ಹಾಗೂ ವಿಚಾರಣೆ ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಸರ್ಕಾರ ಮೂಲಭೂತ ಸವಲತ್ತುಗಳ ಜೊತೆಗೆ ಹಕ್ಕು ಬಾಧ್ಯತೆಯನ್ನು ನೀಡಿ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುತ್ತಿದೆ. ಜೊತೆಗೆ ಆ ಹಕ್ಕುಗಳಿಂದ ಸಿಗುವ ಮೂಲಭೂತ ಸವಲತ್ತುಗಳನ್ನು ಪಡೆದುಕೊಳ್ಳಲು ಸರ್ಕಾರ ಶ್ರಮವಹಿಸಿ ಕಾನೂನುಗಳನ್ನು ರಚನೆ ಮಾಡಿದೆ. ಸರ್ವರಿಗೂ ಸಮಪಾಲು, ಸಮಬಾಳು ಎಂಬ ಸಂವಿಧಾನದ ಆಶೋತ್ತರದ ಅಡಿಯಲ್ಲಿ ಲೋಕಾಯುಕ್ತ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಸರ್ಕಾರವು ರೂಪಿಸಿದ ಯೋಜನೆಗಳು ಹಾಗೂ ಇತರೆ ಸೌಲಭ್ಯಗಳನ್ನು ಎಲ್ಲರಿಗೂ ದೊರಕಿಸುವ ಕಾರ್ಯವನ್ನು ಲೋಕಾಯುಕ್ತ ಸಂಸ್ಥೆ ಮಾಡುತ್ತಿದೆ. ಸಮಾಜದಲ್ಲಿರುವ ಪ್ರತಿಯೊಬ್ಬರು ಗೌರವಯುತವಾಗಿ ಎಲ್ಲ ಸವಲತ್ತುಗಳನ್ನು ಹೊಂದಿ ಸಂತೋಷವಾಗಿ ಬಾಳುವುದೇ ಭಾರತ ಸಂವಿಧಾನದ ಆಶಯವಾಗಿದೆ ಎಂದರು.

ಶಾಸಕಾAಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಕಾರ್ಯನಡೆಗಳ ಬಗ್ಗೆ ಸರ್ಕಾರದ ನಾಲ್ಕನೇ ಅಂಗವಾದ ಮಾಧ್ಯಮ ರಂಗವು ನಿರಂತರ ನಿಗಾವಹಿಸುತ್ತಿದೆ. ಯಾವುದೇ ಅಂಗಗಳಲ್ಲಿನ ಲೋಪದೋಷಗಳನ್ನು ಪ್ರಜೆಗಳ ಮುಂದಿಟ್ಟು ಸರಿಪಡಿಸುವಂತಹ ಮಹತ್ವದ ಜವಬ್ದಾರಿಯನ್ನು ಮಾಧ್ಯಮ ಕ್ಷೇತ್ರ ನಿರ್ವಹಿಸುವುದರಿಂದ ಈ ಕ್ಷೇತ್ರದ ಪಾತ್ರ ಮಹತ್ವದ್ದು. ಆದ್ದರಿಂದ ಲೋಕಾಯುಕ್ತ ಸಂಸ್ಥೆಯ ಕಾರ್ಯ ವಿಧಾನವನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸಲು ಮಾಧ್ಯಮಗಳು ಲೋಕಾಯುಕ್ತದೊಂದಿಗೆ ಸಹಕರಿಸಬೇಕು ಎಂದು ಹೇಳಿದರು.

ಸಾರ್ವಜನಿಕರಿಗೆ ಲಿಖಿತ ಅರ್ಜಿ ಸಲ್ಲಿಸುವ ವಿಧಾನ, ದಾಖಲೆ ಸಹಿತ ಅರ್ಜಿ ಸಲ್ಲಿಕೆ ಹಾಗೂ ಯಾವ ರೀತಿಯ ಅರ್ಜಿಗಳನ್ನು ಲೋಕಯುಕ್ತಕ್ಕೆ ಸಲ್ಲಿಸಬಹುದು. ಈ ಎಲ್ಲ ವಿಚಾರಗಳ ಬಗ್ಗೆ ವಿಸ್ಕೃತವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಿದ ಅವರು, ಸ್ವೀಕರಿಸಿದ ಕೆಲವು ದೂರು ಅರ್ಜಿಗಳ ಬಗ್ಗೆ ಸ್ಥಳದಲ್ಲೇ ತೀರ್ಮಾನ ಕೈಗೊಂಡು ಅದಕ್ಕೆ ಸ್ಥಳದಲ್ಲೆಯೇ ಪರಿಹಾರ ನೀಡಲಾಗುವುದು ಎಂದರು.

ಅಧಿಕಾರಿಗಳು ಜನ ಸಾಮನ್ಯರ ಸಮಸ್ಯೆಗಳಿಗೆ ಸರಿಯಾದ ರೀತಿಯಲ್ಲಿ, ನಿಯಮಾವಳಿ, ಕಾನೂನಿನ ಪ್ರಕಾರವಾಗಿ, ಸಮಯೋಚಿತವಾಗಿ ಪರಿಹಾರ ಒದಗಿಸಿಬೇಕು. ಅದಲ್ಲದೇ ಅಧಿಕಾರ ದುರುಪಯೋಗ, ಭ್ರಷ್ಟಚಾರ ಇಂತಹ ಕಾರಣದಿಂದ ರ್ಜಿ ಸಲ್ಲಿಸಿದವರ ಬಗ್ಗೆ ಅಸಡ್ಡೆತನ ತೋರಿಸಿದರೆ ಅಂತಹ ಅಧಿಕಾರಿಯ ಮೇಲೆ ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಾರ್ವಜನಿಕರು ಕಚೇರಿಗೆ ಬಂದ ಸಂದರ್ಭದಲ್ಲಿ ಅಧಿಕಾರಿಗಳು ಸ್ಪಂದಿಸಿ ಸಮಾಧಾನದಿಂದ ಅವರ ಸಮಸ್ಯೆಗಳನ್ನು ಆಲಿಸಿ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕು. ಕರ್ನಾಟಕ ರಾಜ್ಯ ಶಾಸಕಾಂಗವು ೧೯೮೫ರ ಕರ್ನಾಟಕ ಅಧಿನಿಯಮ ಸಂಖ್ಯೆ ೪ರ ಅಡಿಯಲ್ಲಿ ಕಾಯಿದೆಯನ್ನು ಜಾರಿಗೊಳಿಸಿದೆ. ಆಡಳಿತ ಯಂತ್ರದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಅಶಿಸ್ತಿನ ಪ್ರಕರಣಗಳು ಸೇರಿದಂತೆ ಆಡಳಿತಾತ್ಮಕ ಕ್ರಮಗಳ ವಿರುದ್ಧ ದೂರುಗಳ ವಿಚಾರಣೆ ನಡೆಸುವ ಮೂಲಕ ಸಾರ್ವಜನಿಕ ಆಡಳಿತ ಗುಣಮಟ್ಟವನ್ನು ಸುಧಾರಿಸಲು ಕರ್ನಾಟಕ ಲೋಕಾಯುಕ್ತ ಸಂಸ್ಥೆಯನ್ನು ರಚಿಸಿಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಎಂ ಪಾಟೀಲ್, ಅಪರ ನಿಬಂಧಕರಾದ ಪೃಥ್ವಿರಾಜ್ ವರ್ಣೀಕರ್, ಶಿವಾಜಿ ಅನಂತ ನಲ್ಪಾಡೆ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಹಾಸನ ಚಿಕ್ಕಮಗಳೂರು ಜಿಲ್ಲೆಯ ಲೋಕಾಯುಕ್ತ ಎಸ್‌ಪಿ ಸ್ನೇಹಾ, ಜಿಪಂ ಸಿಇಒ ಎಚ್.ಎಸ್.ಕೀರ್ತನಾ, ಎಸ್‌ಪಿ ಡಾ. ವಿಕ್ರಮ್ ಅಮಟೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net