

ಹಂಸಭಾವಿ: ಸ್ಥಳೀಯ ಮೃತ್ಯುಂಜಯ ವಿದ್ಯಾಪೀಠದ ಮಹಾಂತಸ್ವಾಮಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ 5/27 ಎನ್.ಸಿ.ಸಿ ಕಂಪನಿ ವತಿಯಿಂದ ಇತ್ತೀಚೆಗೆ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು.
ಕಾರ್ಗಿಲ್ ಕದನದಲ್ಲಿ ವೀರ ಮರಣ ಹೊಂದಿದ ಯೋಧರನ್ನು ನೆನೆಯುತ್ತ ಅವರ ಹೆಸರಿನಲ್ಲಿ ಮೇಣದ ಬತ್ತಿ ಹಚ್ಚಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಬಳಿಕ ಕಾರ್ಗಿಕ್ ಕದನದ ಸಾಕ್ಷ್ಯಚಿತ್ರ ತೋರಿಸಲಾಯಿತು.
ಹುಬ್ಬಳ್ಳಿಯ 27 ಕರ್ನಾಟಕ ಬಟಾಲಿಯನ್ ಬಿಎಚ್ ಎಂ. ಮಹೆಂದರ್ ಮಾತನಾಡಿ, ಕಾರ್ಗಿಲ್ ವಿಜಯ್ ದಿವಸ್ದ ಹಿಂದಿನ ಇತಿಹಾಸ ವಿವರಿಸುತ್ತ ಕಾರ್ಗಿಲ್ ಕದನದಲ್ಲಿ ಪ್ರಾಣತೆತ್ತ 520ಕ್ಕೂ ಹೆಚ್ಚು ಯೋಧರು ಅನುಭವಿಸಿದ ಕಷ್ಟಗಳು, ಕಠಿಣ ಪರಿಸ್ಥಿತಿಗಳು, ತ್ಯಾಗ ಬಲಿದಾನಗಳು ಅಂದು ನಮ್ಮ ದೇಶದ ಗಡಿ ಸುರಕ್ಷಿತವನ್ನಾಗಿರಿಸಿತು. ಇದನ್ನು ಇಂದಿನ ಯುವಕರು ಮನದಲ್ಲಿಟ್ಟುಕೊಳ್ಳಬೇಕು, ಆಂತರಿಕ ದೇಶದ ಭದ್ರತೆಗೆ ಸಹಕರಿಸಬೇಕು. ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಎನ್ಸಿಸಿ ಕೆಡೆಟ್ಗಳಾದ ನಿಮ್ಮ ಮೇಲೆ ಅಗಾಧ ಜವಾಬ್ದಾರಿಯಿದೆ. ದೇಶದ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ನಿಮ್ಮ ಸೇವೆ ನೀಡಲು ನೀವು ಸದಾ ಸಿದ್ಧರಿರಬೇಕು ಎಂದರು. ಜೊತೆಗೆ ಕಾರ್ಗಿಲ್ ಕದನದಲ್ಲಿ ನಮ್ಮ ವೀರಯೋಧರು ತೋರಿದ ಅಸಾಧಾರಣ ಧೈರ್ಯ ಸಾಹಸವನ್ನು ವಿವರಿಸಿದರು.
ಕ್ಯಾಪ್ಟನ್ ವಿಕ್ರಂ ಭತ್ರಾ, ಲೆಫ್ಟಿನೆಂಟ್ ಮನೋಜ್ಕುಮಾರ್ ಪಾಂಡೆ ಹಾಗೂ ಇತರೆ ಸೈನಿಕರ ರಾಷ್ಟ್ರ ಪ್ರೇಮ, ಶೌರ್ಯವನ್ನು ತಿಳಿಸಿದರು. ಇಂತಹ ದೇಶಾಭಿಮಾನವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಬೆಳೆಸಿಕೊಳ್ಳಬೇಕು ಎಂದರು.
ಎನ್ಸಿಸಿ ಅಧಿಕಾರಿ ಲೆಫ್ಟಿನೆಂಟ್ ಹುಸೇನ್ಸಾಬ್ ಕಳಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೂನಿಯರ್ ಅಂಡರ್ ಆಫೀಸರ್ ಈರನಗೌಡ ಹುಲ್ಲಲಗೌಡ್ರ ಸ್ವಾಗತಿಸಿದರು. ಕೆಡೆಟ್ ತೇಜಸ್ವಿನಿ ಪ್ರಾಥಿಸಿದರು. ಸಾರ್ಜಂಟ್ ವಿಜಯಲಕ್ಷ್ಮೀ ನಿರೂಪಿಸಿದರು. ಜುನಿಯರ್ ಅಂಡರ್ ಆಫೀಸರ್ ಕಾರ್ತಿಕ್ ಶಿವಪೂರ ವಂದಿಸಿದರು.
ಮಾಜಿ ಕೆಡೆಟ್ಗಳಾದ ಶಿವಕುಮಾರ ಮಾಸಣಗಿ, ರೋಹಿತ್ ಐಹೊಳೆ, ಮಹಮ್ಮದ್ಕೈಫ್, ಮನೋಜ್, ಜನಕರಾಜ್, ಆಯಿಶಾ ಇತರರಿದ್ದರು. ಪ್ರಸಕ್ತ ಸಾಲಿನಲ್ಲಿ ತರಬೇತಿ ಪಡೆಯುತ್ತಿರುವ ದ್ವಿತೀಯ ಹಾಗೂ ತೃತೀಯ ವರ್ಷದ ಎನ್ಸಿಸಿ ಕೆಡೆಟ್ಸ್ ಭಾಗವಹಿಸಿದ್ದರು.