

ಚಾಮರಾಜನಗರ: ಪ್ರತಿಯೊಬ್ಬರೂ ಕಾನೂನು ಜ್ಞಾನ ಪಡೆದುಕೊಳ್ಳುವುದು ಅಗತ್ಯ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಸಲಹೆ ನೀಡಿದರು.
ಜೆ.ಎಸ್.ಎಸ್. ಮಹಾ ವಿದ್ಯಾಪೀಠ, ಪದವಿ ಪೂರ್ವ ಕಾಲೇಜು ಹಾಗೂ ಪದವಿ ಶಿಕ್ಷಣ ಇಲಾಖೆ ವತಿಯಿಂದ ತಾಲೂಕಿನ ರಂಗಸಂದ್ರ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬ ಪ್ರಜೆಗೂ ಹುಟ್ಟಿನಿಂದ ಸಾಯುವವರೆಗೂ ಕಾನೂನಿನ ಅಗತ್ಯತೆ ಇದೆ. ಎಲ್ಲರೂ ಕಾನೂನುಗಳನ್ನು ಅರಿಯುವುದರ ಜತೆಗೆ ಪಾಲನೆಗೆ ಮುಂದಾಗಬೇಕು. ಇದರಿಂದ ಸಮಾಜದ ಶಾಂತಿ, ನೆಮ್ಮದಿ ಬದುಕು ಅಡಗಿದೆ ಎಂದರು.
ಉಪನ್ಯಾಸಕ ಬಿ.ನಾಗರಾಜು ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಮಯಪ್ರಜ್ಞೆ, ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಹೊರಹೊಮ್ಮಬಹುದು. ಜೀವನದಲ್ಲಿ ಯಶಸ್ಸು ಪಡೆಯಲು ಶಿಕ್ಷಣವು ಪ್ರಮುಖ ಅಸ್ತ್ರವಾಗಿದೆ ಎಂದು ಅಭಿಪ್ರಾಯಪಟ್ಟರು.
ಉಪನ್ಯಾಸಕ ಪ್ರಭುಸ್ವಾಮಿ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎಸ್.ಮಂಜು ಮತ್ತು ಪ್ರಧಾನ ಕಾರ್ಯದರ್ಶಿ ಎನ್.ಕೆ.ವಿರೂಪಾಕ್ಷಸ್ವಾಮಿ ಮಾತನಾಡಿದರು. ಎನ್.ಎಸ್.ಎಸ್ ಶಿಬಿರಾಧಿಕಾರಿ ಸಿ.ಗಿರೀಶ್ ಹರವೆ, ಉಪನ್ಯಾಸರಾದ ಕೃತಿ, ರಮ್ಯ, ಎಚ್.ಎಸ್.ವೀರೇಶ್, ಎ.ಎಂ.ಮಹದೇವಸ್ವಾಮಿ, ಶಿಬಿರಾರ್ಥಿಗಳಾದ ಮೌನ, ನಂದಿನಿ, ರಕ್ಷಿತಾ ಇತರರು ಇದ್ದರು.