ಪ್ರತಿಯೊಬ್ಬರೂ ಕಲಾವಿದರಿಗೆ ಪ್ರೋತ್ಸಾಹಿಸಲಿ

13ATHANIGRAMIN3
Published on

ಅಥಣಿ ಗ್ರಾಮೀಣ: ರಂಗಭೂಮಿ ಕಲೆ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಪ್ರತಿಯೊಬ್ಬರೂ ಕಲಾವಿದರಿಗೆ ಪ್ರೋತ್ಸಾಹ ನೀಡುವ ಮೂಲಕ ಕಲೆ ಉಳಿವಿಗೆ ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಲ್ಹಾದ ಪೂಜಾರಿ ಹೇಳಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ದಡಕೆ ತೋಟದ ವಸತಿ ಪ್ರದೇಶದಲ್ಲಿರುವ ಶ್ರೀ ಅಪ್ಪಯ್ಯ ಸ್ವಾಮೀಜಿ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ `ಹುಚ್ಚ ಹಚ್ಚಿದ ಕಿಚ್ಚು' ನಾಟಕ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಸಾಮಾಜಿಕ, ಸಾಮರಸ್ಯ, ಸೌಹಾರ್ದತೆ ಮತ್ತು ಕೌಟುಂಬಿಕ ಹಿನ್ನಲೆಯುಳ್ಳ ಕಥೆೆಯಾಧಾರಿತ ನಾಟಕಗಳಿದ್ದರೂ ಇಂದಿನ ಯುಗದಲ್ಲಿ ರಂಗಭೂಮಿ ಕಲೆಗೆ ಬೆಲೆ ಇಲ್ಲದಂತಾಗಿದೆ. ಹಳ್ಳಿಗಳಲ್ಲಿ ನಡೆಯುವ ಜಾತ್ರೆ, ಹಬ್ಬ, ಹರಿದಿನಗಳಲ್ಲಿ ಮಾತ್ರ ಇಂತಹ ನಾಟಕಗಳು ನಡೆಯುತ್ತಿವೆ ಎಂದರು. ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದ ಡಾ. ಮಲ್ಲಿಕಾರ್ಜುನ ಹಿರೇಮಠ ಮಾತನಾಡಿ, ಪಾಲಕರು ಮಕ್ಕಳಲ್ಲಿನ ಸೂಪ್ತ ಪ್ರತಿಭೆಯನ್ನು ಅನಾವರಣಗೊಳಿಸಬೇಕು. ಅಪ್ಪಯ್ಯಸ್ವಾಮೀಜಿ ಜಾತ್ರಾ ಕಮಿಟಿ ಸದಸ್ಯರು ಪ್ರತಿವರ್ಷ ಜಾತ್ರೆಯಲ್ಲಿ ನಾಟಕ ಪ್ರದರ್ಶನ ಹಮ್ಮಿಕೊಂಡು ಕಲಾವಿದರಿಗೆ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಇದಕ್ಕೂ ಪೂರ್ವ ತುಬಚಿಯ ಡಾ. ಅಲ್ಲಮಪ್ರಭು ಸ್ವಾಮೀಜಿ ಸಾರಥ್ಯದಲ್ಲಿ ರಥೋತ್ಸವ ಜರುಗಿತು. ಬಳಿಕ ಏಕ ಅಭಿನಯ, ಹಾಸ್ಯ ಕಲಾವಿದರಿಂದ ಕಲಾಪ್ರದರ್ಶನಗಳು ಜರುಗಿದವು.

ಮುಖಂಡರಾದ ಸುಭಾಷ ಸೋನಕರ, ಮಲ್ಲಿಕಾರ್ಜುನ ಪರಾಂಡೆ, ಅಣ್ಣಪ್ಪ ಖೋತ, ಸುರೇಶ ಪಾಟಣಕರ, ರಘುನಾಥ ಗವಾನೆ, ಶಿವನಿಂಗ ಧಡಕೆ, ಯಶವಂತ ಪೋಳ, ಪ್ರಲ್ಹಾದ ದಡ್ಡಿ, ಶ್ರೀಶೈಲ ದೊಡಮನಿ, ಕಾಂತು ಮಾದರ, ಶ್ರೀಶೈಲ ಧಡಕೆ, ಶೋಕೊತ ಪಾಚಾಪುರ, ಬಸವರಾಜ ಈರಳೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net