ಪ್ರತಿಯೊಬ್ಬರೂ ಆರ್ಥಿಕವಾಗಿ ಸ್ವಾವಲಂಬಿಗಳಾಗಿ: ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಸಲಹೆ

13
Published on

ಮೈಸೂರು: ಸಹಕಾರ ಕ್ಷೇತ್ರದಲ್ಲಿ ದಲಿತರು, ಹಿಂದುಳಿದ ವರ್ಗಗಳ ಜನರು ಸಕ್ರಿಯವಾಗಿ ಭಾಗಿಯಾದರೆ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅಭಿಪ್ರಾಯಪಟ್ಟರು.
ಗಾಂಧಿನಗರದ ಚಿಕ್ಕಗರಡಿ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧನಶಕ್ತಿ ಕೋ ಆಪರೇಟಿವ್ ಸೊಸೈಟಿ ಉದ್ಘಾಟನಾ ಸಮಾರಂಭದಲ್ಲಿ ಆರ್ಥಿಕ ಸ್ವಾವಲಂಬನೆ ವಿಷಯ ಕುರಿತು ಮಾತನಾಡಿದರು. ದಲಿತರು, ಹಿಂದುಳಿದ ವರ್ಗದವರು ಸೇರಿ ಪ್ರತಿಯೊಬ್ಬರೂ ಆರ್ಥಿಕವಾಗಿ ಸ್ವಾವಲಂಬಿಗಳಾದರೆ ದೇಶ ಪ್ರಗತಿ ಹೊಂದಲು ಸಾಧ್ಯ. ಅದಕ್ಕೆ ಸಹಕಾರಿ ಕ್ಷೇತ್ರ ನೆರವಾಗಲಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಬ್ಯಾಂಕ್‌ಗಳಲ್ಲಿ ದೊರೆಯುವ ಸಾಲ-ಸೌಲಭ್ಯ ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸಬೇಕು. ಸಕಾಲದಲ್ಲಿ ಸಾಲ ಮರು ಪಾವತಿಸುವುದರ ಮೂಲಕ ಬ್ಯಾಂಕ್ ಬೆಳವಣಿಗೆಗೂ ಸಹಕರಿಸಬೇಕು ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಹೇಳಿರುವ ಮಾತಿನಂತೆ ಎಲ್ಲರೂ ಸ್ವಾಭಿಮಾನದಿಂದ ಬದುಕಬೇಕು. ಮತ್ತೊಬ್ಬರ ಅವಲಂಬನೆ, ಸರ್ಕಾರಿ ಯೋಜನೆಗಳ ಮೇಲೆ ಜೀವನ ನಡೆಸಬಾರದು. ಎಲ್ಲವನ್ನೂ ಬೇರೆಯವರೇ ಮಾಡಬೇಕು ಎನ್ನುವ ಮನಸ್ಥಿತಿಯಿಂದ ನಮ್ಮ ಯುವ ಜನಾಂಗ ಹೊರ ಬರಬೇಕು ಎಂದರು.
ಸ್ವಾವಲಂಬಿಯಾಗದ ವ್ಯಕ್ತಿ ಜೀವಂತ ಶವ ಇದ್ದಂತೆ. ನಾವುಗಳು ಕೇವಲ ಭಾಷಣ, ಘೋಷಣೆಗಳಿಂದ ಸ್ವಾವಲಂಬಿಯಾಗಲು ಸಾಧ್ಯವಿಲ್ಲ. ಸ್ವಾವಲಂಬನೆಗೆ ಅರ್ಥ ಬರಬೇಕಾದರೆ ಎಲ್ಲರಿಗೂ ಆರ್ಥಿಕ ಶಕ್ತಿ ತುಂಬಬೇಕು. ತನ್ನ ಊಟ, ಬಟ್ಟೆ, ಮನೆ, ಮಕ್ಕಳ ಶಿಕ್ಷಣ, ಹಬ್ಬ ಹರಿದಿನವನ್ನು ಸ್ವಂತವಾಗಿ ನಿಭಾಯಿಸುವ ಆರ್ಥಿಕ ಶಕ್ತಿ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸರ್ಕಾರ ಅಕ್ಕಿ ನೀಡುವುದರ ಮೂಲಕ ಪರಾವಲಂಬಿಗಳನ್ನಾಗಿ ಮಾಡಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಅಕ್ಕಿ ಕೊಟ್ಟಿರುವ ಸರ್ಕಾರ ಬೇರೆ ಊಟಕ್ಕೆ ಪದಾರ್ಥ, ವಾಸಿಸಲು ಮನೆ, ಖರ್ಚಿಗೆ ಹಣ ಕೊಡಬೇಕು ಎನ್ನುವ ಮನಸ್ಥಿತಿಯಲ್ಲಿ ಸಾಕಷ್ಟು ಜನರಿದ್ದಾರೆ. ಇಂತಹ ಪರಾವಲಂಬಿತನ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಯೋಜನೆಗಳನ್ನು ಬಳಸಿಕೊಂಡು ಬಡವರ ಸ್ಥಿತಿ ಬದಲಿಸಬೇಕು. ಸಹಕಾರ ಸಂಘಗಳಲ್ಲಿ ಹೆಚ್ಚು ಹೆಚ್ಚು ಸದಸ್ಯರನ್ನು ನೋಂದಣಿ ಮಾಡಿ ಎಲ್ಲರೂ ಪ್ರಗತಿ ಸಾಧಿಸಿದರೆ ಸಾಕಷ್ಟು ಅಭಿವೃದ್ಧಿ ಹೊಂದಬಹುದು ಎಂದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹಾಗೂ ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ಸಹಕಾರಿ ಸಂಸ್ಥೆಗಳು ನಮ್ಮವರ ಆರ್ಥಿಕ ಸದೃಢತೆಗೆ ದಾರಿದೀಪವಾಗಲಿದೆ. ಸಹಕಾರ ಬ್ಯಾಂಕುಗಳು ಅಭಿವೃದ್ಧಿ ಹೊಂದಿದರೆ ಹಲವಾರು ಕೆಲಸಗಳಿಗೆ ನೆರವಾಗಲಿದೆ ಎಂದರು.
ವಿದ್ಯೆ ಇಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳಬಾರದು. ಯಾವುದೇ ವಿದ್ಯೆ, ಪದವಿ ಇಲ್ಲದೆ ತಿಂಗಳಿಗೆ 30 ರಿಂದ 40 ಸಾವಿರ ದುಡಿಯುವ ಕೌಶಲ ಹೊಂದಿರುವವರು ನಮ್ಮ ಮುಂದಿದ್ದಾರೆ. ಆದರೆ ಎರಡು ಪದವಿ ಪಡೆದರೂ ಉದ್ಯೋಗ ಇಲ್ಲ, ಸರ್ಕಾರ ಏನು ಮಾಡುತ್ತಿಲ್ಲ ಎಂದು ಮಾತನಾಡುತ್ತಾ ಕಾಲ ಕಳೆಯುವವರು ನಮ್ಮ ಮುಂದಿದ್ದಾರೆ ಎಂದು ವಿಷಾದಿಸಿದರು.
ಸೊಸೈಟಿ ಅಧ್ಯಕ್ಷ ಶರತ್‌ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎನ್.ಸದಾನಂದ, ನಾಮ ನಿರ್ದೇಶಿತ ನಿರ್ದೇಶಕ ಪ್ರಭಾಕರ್ ಸಿಂಧ್ಯಾ, ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ಅನಿಲ್ ಥಾಮಸ್, ಸೊಸೈಟಿ ಉಪಾಧ್ಯಕ್ಷ ವಿ.ರಾಜೇಶ್, ನಿರ್ದೇಶಕರಾದ ಸಿ.ದೇವರಾಜ, ಎನ್.ಸುರೇಶ್, ಮುರುಳೀಧರ್, ಸುರೇಂದ್ರ, ಪರವಾನಂದ ದಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net