

ಹಾಸನ : ನಾಗರೀಕರು ಯಾವುದೇ ಆಸೆ, ಅಮಿಷಕ್ಕೆ ಒಳಗಾಗದೆ ಚುನಾವಣಾ ಸಂದರ್ಭಗಳಲ್ಲಿ ಪ್ರತಿಯೊಬ್ಬರು ಮತ ಚಲಾಯಿಸಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಎನ್.ಇನವಳ್ಳಿ ಮತದಾರರಿಗೆ ಕಿವಿಮಾತು ಹೇಳಿದರು.
ಜಿಲ್ಲಾಡಳಿತದ ವತಿಯಿಂದ ಹಿಮ್ಸ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಜ್ಞಾ ವಿದಿ ಸ್ವೀಕರಿಸುತ್ತೇವೆ ಆದರೆ ಅದನ್ನು ಅನುಷ್ಠಾನಕ್ಕೆ ತರುವುದನ್ನು ಮರೆಯುತ್ತೇವೆ ಇದು ಬೇಸರದ ಸಂಗತಿ ಎಂದರು.
ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶ, ಸಂವಿಧಾನದಲ್ಲಿ ಎಲ್ಲರಿಗೂ ಸಮಾನವಾದ ಹಕ್ಕು ಕಲ್ಪಿಸಿದ್ದಾರೆ. ಇದನ್ನು ಉತ್ತಮವಾಗಿ ಬಳಸಿಕೊಳ್ಳಬೇಕು ಎಂದರು. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದ ಜೊತೆಗೆ ನಾಲ್ಕನೆ ಅಂಗವಾಗಿ ಪತ್ರಿಕಾ ರಂಗ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಜೀವನದಲ್ಲಿ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲು ಇತಿಹಾಸ ತಿಳಿದುಕೊಂಡು ಮಾತಿಗಿಂತ ಕೆಲಸ ಮಾಡಿ ಜತೆಗೆ ಸಮಯ ಪಾಲನೆಗೆ ಒತ್ತು ನೀಡಿ ಆತ್ಮಸಾಕ್ಷಿಯಾಗಿ ನಡೆದುಕೊಳ್ಳಿ, ಕಾಲ ಬದಲಾಗಿದೆ ಎಂದು ಹೇಳುತ್ತೇವೆ ಅದು ಹಾಗೆ ಇದೆ. ನಾವು ಬದಲಾಗಿದ್ದೇವೆ. ಸಮಾಜ, ಸಂಸ್ಕೃತಿ ನೋಡಿ ಮೂಲ ಸತ್ವದಲ್ಲಿ ಬದಲಾವಣೆಯಾಗಿಲ್ಲ, ನೈತಿಕತೆ ಇದ್ದರೆ ಕಾನೂನು ಬದ್ದವಾಗಿರುತ್ತದೆ ಎಂದರು.
ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಮಾತನಾಡಿ, ಭಾರತ ಚುನಾವಣಾ ಆಯೋಗವು ತಿಳಿಸಿರುವಂತೆ ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ ಎಂಬ ಧ್ಯೇಯವಾಕ್ಯದಂತೆ ಪ್ರತಿಯೊಬ್ಬರು ಮತದಾನ ಮಾಡಬೇಕು. ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು ಇದು ಎಲ್ಲರ ಜವಾಬ್ದಾರಿ ಎಂದರು. 18 ವರ್ಷ ತುಂಬಿದ ಯುವ ಜನತೆ ಹೆಸರು ನೋಂದಾಯಿಸಿಕೊಳ್ಳಬೇಕು ಜೊತೆಗೆ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಿಳಿಸಿದರು.
ಭಾರತ ಚುನಾವಣಾ ಆಯೋಗದ ಸ್ಥಾಪನೆಯ ಸವಿ ನೆನಪಾಗಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಜನ ಸಂಖ್ಯೆಯಲ್ಲಿ ಚೀನಾ ದೇಶವನ್ನು ಹಿಂದಿಕ್ಕಿ ಮುನ್ನಡೆಯುತ್ತಿರುವ ಭಾರತ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ ಎಂದರು.
ಡಾ.ಬಿ.ಆರ್. ಅಂಬೇಡ್ಕರ್ ಅವರು ವಿವಿಧ ದೇಶಗಳ ಒಳ್ಳೆಯ ವಿಷಯಗಳನ್ನು ಆಯ್ದುಕೊಂಡು ಒಂದು ಸುಂರದವಾದ ಸಂವಿಧಾನ ರಚನೆ ಮಾಡಿಕೊಟ್ಟಿದ್ದಾರೆ. ಅದರಲ್ಲಿ ತಿಳಿಸಿರುವಂತೆ ನಮ್ಮ ಹಕ್ಕುಗಳ ಜೊತೆಗೆ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಅರಿತು ಪಾಲನೆ ಮಾಡಬೇಕು ಎಂದು ತಿಳಿಸಿದರು.
ಕಾನೂನಿನ ಚೌಕಟ್ಟಿನಲ್ಲಿ ನಿಷ್ಪಕ್ಷವಾಗಿ, ನ್ಯಾಯಯುತ ಹಾಗೂ ಪಾರದರ್ಶಕವಾಗಿ ಚುನಾವಣೆ ಪ್ರಕ್ರಿಯೇ ನಡೆಯಲಿದೆ. ಪ್ರಜ್ಞಾವಂತ ಮತದಾರರು ಸರಿತಪ್ಪುಗಳ ಬಗ್ಗೆ ವಿಶ್ಲೇಷಣೆ ಮಾಡಿ ಜವಾಬ್ದಾರಿಯಿಂದ ಮುಕ್ತವಾಗಿ ಮತ ಚಲಾಯಿಸಬೇಕು. ಯುವ ಮತದಾರರು ರಾಯಬಾರಿಗಳಾಗಿ ತಮಗೆ ದೊರೆತಿರುವ ಹಕ್ಕನ್ನು ಹೆಮ್ಮೆಯಿಂದ ಮತಚಲಾಯಿಸಿ ಎಂದು ಕರೆ ನೀಡಿದರು.
ಭಾರತ ಚುನಾವಣಾ ಆಯೋಗವು 80 ವರ್ಷ ಮೇಲ್ಪಟ್ಟ ವಯೋವೃದ್ದರಿಗೆ ಮನೆಯಿಂದಲೆ ಮತಚಲಾಯಿಸಲು ಅವಕಾಶ ಮಾಡಿಕೊಟ್ಟಿದೆ. ಮತದಾನ ಮಾಡುವಂತೆ ಎಲ್ಲರನ್ನು ಬಡಿದ್ದೆಬಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ತಿಳಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ ಅವರು ಪ್ರಜಾಪ್ರಭುತ್ವದಲ್ಲಿ ದೃಡ ವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ. ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂದು ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇವೆ ಎಂದು ಪ್ರತಿಜ್ಞಾ ವಿಧಿ ಬೋದಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ.ರವಿಕಾಂತ್, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಹಿಮ್ಸ್ ನಿರ್ದೇಶಕ ಡಾ.ಸಂತೋಷ್, ಉಪ ವಿಭಾಗಾಧಿಕಾರಿ ಮಾರುತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ರಾಜ್ಯ ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ಈ.ಕೃಷ್ಣೇಗೌಡ, ತಹಸೀಲ್ದಾರ್ ಶ್ವೇತಾ ಇತರರು ಇದ್ದರು.