ಪ್ರತಿಯೊಬ್ಬರು ಭಗವದ್ಗೀತೆಯ ಸಾರವನ್ನು ಅರಿಯಿರಿ

17rajesh9
Published on

ಚಾಮರಾಜನಗರ: ಪ್ರತಿಯೊಬ್ಬರು ಭಗವದ್ಗೀತೆಯನ್ನು ಅಧ್ಯಯನ ಮಾಡುವ ಮೂಲಕ, ಜೀವನದ ಕಷ್ಟಗಳಿಂದ ವಿಮುಕ್ತರಾಗಬಹುದಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಅನಂತ ನಾಗೇಂದ್ರ ಭಟ್ ಹಿತ್ಲಳ್ಳಿ ಸಲಹೆ ನೀಡಿದರು.

ನಗರದ ಸೇವಾ ಭಾರತಿ ಶಾಲಾ ಆವರಣದಲ್ಲಿ ಶಿರಸಿಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶ್ರೀಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ ಹಾಗೂ ಶ್ರೀ ಭಗವದ್ಗೀತಾ ಅಭಿಯಾನ ಸಮಿತಿ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀಭಗವದ್ಗೀತಾ ಅಭಿಯಾನ-2024 ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಸ್ತುತ ಸಂದರ್ಭದಲ್ಲಿ ಭಗವದ್ಗೀತೆಯ ಮಹತ್ವ ಮತ್ತು ಅಗತ್ಯವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಭಗವದ್ಗೀತಾ ಅಭಿಯಾನ ಸಹಕಾರಿಯಾಗಿದೆ. ಭಗವದ್ಗೀತೆಯಲ್ಲಿ ಪ್ರತಿಯೊಬ್ಬ ಜನರಿಗೂ ಅಗತ್ಯವಾಗಿರುವ ಸಾರವೇ ಅಡಗಿದೆ. ಜಗತ್ತಿನಲ್ಲೇ ನಮ್ಮ ಸಂಪೂರ್ಣ ಸಮಸ್ಯೆಗಳನ್ನು ಬಗೆಹರಿಸುವ ಗ್ರಂಥ ಯಾವುದಾರೂ ಇದ್ದರೇ, ಅದು ಭಗವದ್ಗೀತೆಯಾಗಿದೆ. ಅದಲ್ಲದೇ ವೇದೋಪದೇಶಗಳು ನಮ್ಮ ಜೀವನವನ್ನು ಹಸನುಗೊಳಿಸುತ್ತದೆ ಎಂದು ಹೇಳಿದರು.

ಜಗತ್ತಿನ ಪ್ರತಿಯೊಂದು ಜೀವಿಗಳು ಸಹ ಸುಖವಾಗಿ ಇರಬೇಕು, ದುಃಖದಿಂದ ವಿಮುಕ್ತಿಯಾಗಬೇಕು ಎಂಬುದು ಹಿಂದೂ ಧರ್ಮದ ಸಾರವಾಗಿದೆ. ಇದು ಯಾರೋ ಒಬ್ಬರು ಹೇಳಿದ ಧರ್ಮವಾಗಿಲ್ಲ. ಎಲ್ಲಾ ವೇದ-ಉಪನಿಷತ್‌ಗಳು ಸಹ ಆತ್ಮತತ್ವವನ್ನು ಹೇಳುತ್ತದೆ. ಭಗವದ್ಗೀತೆ ಬಹಳ ವಿಸ್ತಾರವಾಗಿದ್ದು, ಗೀತೆ ಕುರಿತು ಅಪಪ್ರಚಾರ ಮಾಡುವುದಕ್ಕೆ ಆಸ್ಪದ ನೀಡಬಾರದು. ಜಗತ್ತಿನ ಪ್ರತಿಯೊಬ್ಬರು ಅನುಸರಿಸಬಹುದಾದ ಸಾರವನ್ನು ಧರ್ಮವೆಂದು ಕರೆಯುತ್ತೇವೆ. ಆ ಧರ್ಮದ ಮಾರ್ಗವನ್ನು ಭಗವದ್ಗೀತೆ ಒಳಗೊಂಡಿದ್ದು, ಪ್ರತಿಯೊಬ್ಬರು ಅಧ್ಯಯನ ಮಾಡಬೇಕಾದ ಗ್ರಂಥವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಟಿ.ನರಸೀಪುರ ಮುಡಕನಪುರ ಮಠದ ಶ್ರೀದೇಶಿಕೇಂದ್ರ ಷಡಕ್ಷರಿಸ್ವಾಮಿ, ನಗರಸಭೆ ಅಧ್ಯಕ್ಷ ಎಸ್.ಸುರೇಶ್, ಶ್ರೀಭಗವದ್ಗೀತಾ ಅಭಿಯಾನ ಸಮಿತಿ ಅಧ್ಯಕ್ಷ ದುಗ್ಗಹಟ್ಟಿ ಮಲ್ಲಿಕಾರ್ಜುನಸ್ವಾಮಿ, ಕಾರ್ಯದರ್ಶಿ ಸುರೇಶ್ ಎನ್.ಋಗ್ವೇದಿ, ಖಜಾಂಚಿ ಎಸ್.ಬಾಲಸುಬ್ರಹ್ಮಣ್ಯಂ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವಿಜೇತರಿಗೆ ಬಹುಮಾನ:

ಶ್ರೀಭಗವದ್ಗೀತಾ ಅಭಿಯಾನದ ಅಂಗವಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಆಯೋಜಿಸಿದ್ದ ಭಗವದ್ಗೀತೆ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಎಚ್‌ಪಿ ಶಾಲೆಯ ನೇಹಾ ಹೆಗ್ಗಡೆ ಮತ್ತು ಯಳಂದೂರಿನ ಎಸ್‌ಡಿವಿಎಸ್ ಶಾಲೆಯ ವಿದ್ಯಾರ್ಥಿನಿ ಕೃಪಾನಿಕ್ಷ ಪ್ರಥಮ ಸ್ಥಾನಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದರು. ಉಳಿದಂತೆ ತಾಲೂಕು ಮಟ್ಟದಲ್ಲಿ ಆಯ್ಕೆಯಾದ 18 ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪಶಸ್ತಿ ಪತ್ರ ವಿತರಿಸಲಾಯಿತು. ಇದೇ ವೇಳೆ ಅಧ್ಯಾಪಕರನ್ನು ಸನ್ಮಾನಿಸಲಾಯಿತು.

ಹಲವಾರು ವರ್ಷಗಳಿಂದ ಭಗವದ್ಗೀತಾ ಅಭಿಯಾನವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಭಗವದ್ಗೀತೆಯ ಮಹತ್ವವನ್ನು ತಿಳಿಸಿಕೊಡುವುದು, ಈ ಅಭಿಯಾನದ ಉದ್ದೇಶವಾಗಿದೆ. ಭಗವದ್ಗೀತೆ ಕಂಠಪಾಠ ಮತ್ತು ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ.

-ಗಣಪತಿ ಮಹಾದೇವ ಹೆಗಡೆ, ಗೌರವಾಧ್ಯಕ್ಷ, ಶ್ರೀಭಗವದ್ಗೀತಾ ಅಭಿಯಾನ ಸಮಿತಿ, ಚಾ.ನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net