ಪ್ರತಿಯೊಬ್ಬರು ತಪ್ಪದೇ ಭಾಗವಹಿಸಿ

Published on

ಬಳ್ಳಾರಿ : ಇಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಆಯೋಜಿಸುವ ಬೃಹತ್ ಮಾನವ ಸರಪಳಿ ನಿರ್ಮಾಣಕ್ಕೆ ಪ್ರತಿಯೊಬ್ಬರು ತಪ್ಪದೇ ಭಾಗವಹಿಸಿ ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.ನಗರದ ಡಿಸಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎಲ್ಲ ಸರ್ಕಾರಿ ಇಲಾಖೆಯ ಅಧಿಕಾರಿಗಳು ತಪ್ಪದೇ ಪಾಲ್ಗೊಳ್ಳುವಂತೆ ಆದೇಶಿಸಿದರು. ಬೆಳಗ್ಗೆ 8.30 ರಿಂದ 9.30 ರವರೆಗೆ ಕಾರ್ಯಕ್ರಮ ನಡೆಯಲಿದೆ. ಮಾನವ ಸರಪಳಿ ಆಯೋಜನೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಸಮುದಾಯಗಳ ಮುಖಂಡರು, ಎನ್‌ಜಿಒ, ಸ್ತಿಥ ಶಕ್ತಿ ಸ್ವಸಹಾಯ ಸಂಘ, ರೋಟರಿ ಸಂಸ್ಥೆಗಳ ಮುಖಂಡರು ಸೇರಿದಂತೆ ಸಾರ್ವಜನಿಕರು ಭಾಗವಹಿಸುತ್ತಾರೆ ಎಂದು ಹೇಳಿದರು. ಅಂದಾಜು 32000 ಕ್ಕೂ ಹೆಚ್ಚು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳನ್ನೊಳಗೊಂಡಂತೆ ವಿಜಯನಗರ ಜಿಲ್ಲೆಯ ಗಡಿಭಾಗದ ಭುವನಹಳ್ಳಿ- ಸಂಡೂರು ತಾಲೂಕಿನ ಕುರೆಕುಪ್ಪ-ವಡ್ಡು-ಬನ್ನಿಹಟ್ಟಿ-ಲಿಂಗದಹಳ್ಳಿ-ಉಬ್ಬಲಗಂಡಿ-ಯು.ರಾಜಾಪುರ-ಯು.ಮಲ್ಲಾಪುರ-ಸಂತೇಗುಡ್ಡ ಮೇಲಿನಕಣಿವೆ (ಚಿತ್ರದುರ್ಗ ಜಿಲ್ಲೆಯ ಗಡಿ ಭಾಗ) ವರೆಗೆ ಸುಮಾರು 45.9 ಕಿಮೀ ಉದ್ದದ ಮಾನವ ಸರಪಳಿಯನ್ನು ನಿರ್ಮಿಸಲಾಗುವುದು. ಜಿಲ್ಲಾಡಳಿತದಿಂದ ಬನ್ನಿಹಟ್ಟಿ ಗ್ರಾಮದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮಾನವ ಸರಪಳಿ ಮಾರ್ಗ ಮಧ್ಯದಲ್ಲಿ ಪ್ರತಿ 100 ಮೀ., ಪ್ರತಿ 1 ಕಿಮೀ., ಹಾಗೂ ಪ್ರತಿ 2.ಕಿಮೀ ಗೆ ಒಬ್ಬರಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಮತ್ತು ಮಕ್ಕಳ ಹಿತದೃಷ್ಟಿಯಿಂದ, ಆರೋಗ್ಯ, ಭದ್ರತೆ, ಇನ್ನಿತರೆ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಮೇಲುಸ್ತುವಾರಿಗಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ. ವಿದ್ಯಾರ್ಥಿಗಳಿಗೆ 3000 ಬಾವುಟಗಳು ಹಾಗೂ ಮಕ್ಕಳಿಗೆ ರಿಬ್ಬನ್ ಬ್ಯಾಂಡ್ ನೀಡಲಾಗುತ್ತದೆ. ಮಾರ್ಗದುದ್ದಕ್ಕೂ 2000 ಸಸಿಗಳನ್ನು ನೆಡಲಾಗುವುದು ಎಂದರು. ಇದೇ ವೇಳೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪೋಸ್ಟರ್‌ಬಿಡುಗಡೆಗೊಳಿಸಲಾಯಿತು. ಎಡಿಸಿ ಮಹಮ್ಮದ್ ಎನ್. ಝಬೇರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಿ. ಮಲ್ಲಿಕಾರ್ಜುನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net