

ಕನಕಗಿರಿ: ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಸಂವಿಧಾನ ನೀಡಿರುವ ಹಕ್ಕನ್ನು ಚಲಾಯಿಸಬೇಕು ಎಂದು ತಾಪಂ ಇಒ ಚಂದ್ರಶೇಖರ ಕಂದಕೂರ ಹೇಳಿದರು.
ತಾಲೂಕಿನ ಚಿಕ್ಕಮಾದಿನಾಳ ಗ್ರಾಪಂ ವ್ಯಾಪ್ತಿಯ ಬಂಕಾಪುರ ಮತ್ತು ರಾಮದುರ್ಗ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಕೂಲಿಕಾರರಿಗೆ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮತದಾನ ಎಂಬುದು ಸಂವಿಧಾನ ನೀಡಿರುವ ವರವಾಗಿದೆ.ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ, ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಮತದಾನದಿಂದ ವಂಚಿತರಾಗದೇ ಎಲ್ಲರೂ ಕಡ್ಡಾಯವಾಗಿ ಮೇ 10 ರಂದು ಮತದಾನದ ಹಕ್ಕು ಚಲಾಯಿಸಬೇಕು ಎಂದರು.
ಕೂಲಿಕಾರರ ಆರೋಗ್ಯ ಕಾಪಾಡಲು ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಆರೋಗ್ಯ ಶಿಬಿರ ನಡೆಸಲಾಗುತ್ತದೆ. ಶಿಬಿರದಲ್ಲಿ ಬಿಪಿ, ಶುಗರ್ ಸಣ್ಣ ಪುಟ್ಟ ಕಾಯಿಲೆಗಳಿಗೆ ವೈದ್ಯರು ಚಿಕ್ಸಿತೆ ನೀಡಲಿದ್ದಾರೆ. ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು.
ಉದ್ಯೋಗ ಖಾತ್ರಿ ಯೋಜನೆಯಡಿ ಈ ಬಾರಿ ಕೂಲಿಕಾರರಿಗೆ 309 ರೂ ಇದ್ದ ಕೂಲಿ ಹಣವನ್ನು, ಪ್ರಸಕ್ತ ವರ್ಷದಲ್ಲಿ 7 ರೂ. ಹೆಚ್ಚಿಸಿ ರೂ. 316/- ಕೂಲಿಯನ್ನು ನೀಡಲಾಗುತ್ತದೆ. ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೂಲಿ ನೀಡಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರು ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಕೂಲಿಕಾರರಿಗೆ ಮತದಾನ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಪಿಡಿಒ ನೀಲಾ ಸೂರ್ಯಕುಮಾರಿ, ತಾಂತ್ರಿಕ ಸಹಾಯಕ ಮಹಾಂತೇಶ್ ಕಿಲ್ಲಾರಹಟ್ಟಿ, ಆರೋಗ್ಯ ಇಲಾಖೆ ಹಾಗೂ ಗ್ರಾಪಂ ಸಿಬ್ಬಂದಿ, ಕಾಯಕ ಬಂಧುಗಳು, ಕೂಲಿಕಾರರು ಇದ್ದರು.