

ಚಾಮರಾಜನಗರ: ಪ್ರತಿಯೊಬ್ಬರೂ ಸಂವಿಧಾನದ ಬಗ್ಗೆ ಅರಿವು ಪಡೆಯಬೇಕು. ಜತೆಗೆ ಸಂವಿಧಾನ ಮೂಲ ಆಶಯಗಳನ್ನು ಪಾಲನೆ ಮಾಡಬೇಕು ಎಂದು ನಗರಸಭೆ ಅಧ್ಯಕ್ಷ ಸುರೇಶ್ ಹೇಳಿದರು.
ನಗರದ ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಜನಹಿತಾಶಕ್ತಿ ಹೋರಾಟ ವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಸಂವಿಧಾನ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ಅವರು ಭಾರತದ ಅಭಿವೃದ್ಧಿಗೆ ಪೂರಕವಾದ ಸುಭದ್ರ ಸಂವಿಧಾನ ರಚನೆ ಮಾಡಿ, ದೇಶಕ್ಕೆ ಅರ್ಪಣೆ ಮಾಡಿದ್ದಾರೆ. ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ವಿದ್ಯಾರ್ಥಿದಿಸೆಯಲ್ಲೇ ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಅಧ್ಯಯನ ಮಾಡಬೇಕು. ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವ ಮೂಲಭೂತ ಹಕ್ಕುಗಳ ಜತೆ ಕರ್ತವ್ಯಗಳನ್ನು ಪಾಲನೆ ಮಾಡುವುದಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಜೆಎಸ್‌ಎಸ್ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಎ.ಆರ್.ಸುಷ್ಮಾ ವಿಚಾರ ಮಂಡನೆ ಮಾಡಿ, ಜಗತ್ತಿನ ಹಲವಾರು ದೇಶಗಳು ತಮ್ಮದೇ ಆದ ಸಂವಿಧಾನ ಅಳವಡಿಸಿಕೊಂಡಿವೆ. ಭಾರತದ ಸಂವಿಧಾನ 474 ವಿಧಿಗಳು, 25 ಭಾಗ, 12 ಅನುಸೂಚಿಗಳನ್ನು ಒಳಗೊಂಡಿದ್ದು, ಇದು ಸವಿಸ್ತಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಖಿ ರಾಷ್ಟ್ರ ನಿರ್ಮಾಣ, ಒಗ್ಗಟ್ಟು ಪ್ರದರ್ಶನ, ಜಾತ್ಯಾತೀತ ಮನೋಭಾವ ಸಂವಿಧಾನದ ಅಡಿಪಾಯವಾಗಿದೆ ಎಂದರು.
ಅಂಬೇಡ್ಕರ್ ಅವರು ಸತತ ಮೂರು ವರ್ಷಗಳ ಕಾಲ ವಿವಿಧ ದೇಶಗಳ ಸಂವಿಧಾನ ಅಧ್ಯಯನ ಮಾಡಿ, ಭಾರತದ ಅಭಿವೃದ್ಧಿಗೆ ಪೂರಕವಾದ ಅಮೂಲ್ಯವಾದ ಸಂವಿಧಾನವನ್ನು ದೇಶಕ್ಕೆ ಸಮರ್ಪಣೆ ಮಾಡಿದರು. ಸಂವಿಧಾನ ಇಲ್ಲದ ದೇಶಗಳನ್ನು ಇಂದು ಊಹಿಸಿಕೊಳ್ಳುವುದು ಅಸಾಧ್ಯ. ಮಾನವೀಯ ಮೌಲ್ಯಗಳ ಆಗರವಾಗಿರುವ ಸಂವಿಧಾನದ ಮೂಲ ಆಶಯಗಳನ್ನು ನಾವು ಪಾಲನೆ ಮಾಡುವ ಅಗತ್ಯವಿದೆ ಎಂದರು.
ಜನ ಹಿತಾಶಕ್ತಿ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ರಾಮಸಮುದ್ರ ಸುರೇಶ್ ಮಾತನಾಡಿ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನದ ಮಹತ್ವದ ಬಗ್ಗೆ ಅರಿವು ಮೂಡಿಸುವುದೇ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಜಯಣ್ಣ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ, ಶೈಲೇಶ್‌ಕುಮಾರ್, ಐಕ್ಯೂಎಸಿ ಸಂಚಾಲಕಿ ದೀಪಾ, ಸಾಹಿತಿ ಶಂಕರ್ ಅಂಕನಶೆಟ್ಟಿಪುರ, ಸಿದ್ದಾರ್ಥ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ರಂಗಸ್ವಾಮಿ ಇತರರು ಇದ್ದರು.