ಪ್ರತಿಯೊಬ್ಬರಿಗೂ ನರೇಗಾ ತಲುಪಲಿ

Exif_JPEG_420
Exif_JPEG_420
Published on

ಬಸವಕಲ್ಯಾಣ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಮಾಜದ ಕಟ್ಟಕಡೆ ಕುಟುಂಬಗಳಿಗೆ ಮತ್ತು ರೈತರಿಗೆ ಮುಟ್ಟಬೇಕು ಎಂದು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸಂತೋಷ ಚವ್ಹಾಣ್ ಹೇಳಿದರು.

ಯರಂಡಿ ಗ್ರಾಮದಲ್ಲಿ ಶುಕ್ರವಾರ `ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯೆಡೆಗೆ ಅಭಿಯಾನ ಹಾಗೂ ಮನೆ ಮನೆ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿ, ೨೦೨೪-೨೫ನೇ ಸಾಲಿನ ಕ್ರಿಯಾ ಯೋಜನೆ ಕುರಿತು ತಯಾರಿಸಲು ಜನರಲ್ಲಿ ಜಾಗೃತಿಗಾಗಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಗ್ರಾಮದ ಪ್ರತಿ ಮನೆಗೆ ಭೇಟಿ ನೀಡಿ ಕಾಮಗಾರಿ ಪಡೆದುಕೊಳ್ಳುವುದು ಮತ್ತು ಗ್ರಾಮಸ್ಥರಲ್ಲಿ ಯೋಜನೆ ಜಾಗೃತಿ ಮೂಡಿಸುವುದು ಇದರ ಉದ್ದೇಶ. ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ, ಕಾಯಕ ಮಿತ್ರರು ಕೂಡಿಕೊಂಡು ಅಭಿಯಾನ ಯಶಸ್ವಿಗೊಳಿಸಿ, ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.

ತಾಲೂಕು ಪಂಚಾಯಿತಿ ತಾಂತ್ರಿಕ ಸಂಯೋಜಕರಾದ ಶಿವರಾಜ ಪಾಟೀಲ್ ಮಾತನಾಡಿ, ಮುಂದಿನ ಕ್ರಿಯಾ ಯೋಜನೆಯಲ್ಲಿ ರೈತರಿಗೆ ಉದ್ಯೋಗ ಖಾತ್ರಿ ಯೋಜನೆಯ ಸುಮಾರು ೫ ಲಕ್ಷ ರೂ.ವರೆಗೆ ಹೊಲದಲ್ಲಿ ಕೆಲಸ ಮಾಡಿಕೊಳ್ಳಬಹುದಾಗಿದೆ. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಶಾಮಲಾಬಾಯಿ ಶಿಂಧೆ ಅಭಿಯಾನಕ್ಕೆ ಚಾಲನೆ ನೀಡಿದರು. ಗ್ರಾಪಂ ಉಪಾಧ್ಯಕ್ಷೆ ಶ್ರೀದೇವಿ ಪೂಜಾರಿ, ಪಿಡಿಒ ಶಿವಪುತ್ರ ವೀರಶೆಟ್ಟೆ, ತಾಂತ್ರಿಕ ಸಹಾಯಕ ಮಾಣಿಕ ಸೋನಕೇರಾ, ಗ್ರಾಪಂ ಕಾರ್ಯದರ್ಶಿ ದತ್ತಾತ್ರಿ, ಐಇಸಿ ಸಂಯೋಜಕ ವೀರಾರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net