ಪ್ರತಿಯೊಬ್ಬರಿಗೂ ನಮ್ಮ ಕಾನೂನಿನ ಅರಿವಿರಬೇಕು

30blrp1
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಪ್ರಸನ್ನಕುಮಾರ್ ಮಾತನಾಡಿದರು.
Published on

ಬೇಲೂರು: ಭಾರತದ ನಾಗರಿಕರೆಲ್ಲರೂ ನಮ್ಮ ನೆಲದ ಕಾನೂನುಗಳ ಅರಿವು ಹೊಂದಬೇಕಿರುವುದು ಆದ್ಯ ಕರ್ತವ್ಯ ಎಂದು ನ್ಯಾಯಾಧೀಶ ಪ್ರಸನ್ನಕುಮಾರ್ ಹೇಳಿದರು.

ಬೇಲೂರು ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮದು ಉತ್ತಮ ಪ್ರಜಾಪ್ರಭುತ್ವ ಹೊಂದಿರುವ ದೇಶ. ಇಲ್ಲಿ ಪ್ರತಿಯೊಬ್ಬರಿಗೂ ಒಂದೇ ಕಾನೂನು ಅನ್ವಯಿಸುತ್ತದೆ. ಆದ್ದರಿಂದ ನೆಲದ ಕಾನೂನನ್ನು ಎಲ್ಲರೂ ಗೌರವಿಸಿ ನಡೆಯಬೇಕು. ದುರ್ಬಲರಿಗೆ ಉಚಿತ ಕಾನೂನು ಸೇವೆ, ನೆರವು ನೀಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಬೇಲೂರಿನ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಪ್ರಕಾಶ್ ನಾಯಕ್ ಮಾತನಾಡಿ, ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದ ಅರಿವು, ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಪ್ರೌಢಶಾಲೆ ಮುಖ್ಯೋಪಾಧ್ಯಾಯ ಚಂದ್ರಶೇಖರ್ ಮಾತನಾಡಿ, ನಾಗರಿಕ ಸಮಾಜದಲ್ಲಿ ಸ್ವಸ್ಥ ಬದುಕು ಸಾಗಿಸಲು ನಾಗರಿಕರಿಗೆ ಅವಕಾಶಗಳು ಹಾಗೂ ನಿಬಂಧನೆಗಳು ಅನಿವಾರ್ಯ. ಅವುಗಳನ್ನು ಒಳಗೊಂಡಿರುವುದೇ ನಮ್ಮ ಸಂವಿಧಾನ. ಆದ್ದರಿಂದ ನಾವೆಲ್ಲರೂ ಸಂವಿಧಾನದ ಅಡಿಯಲ್ಲಿ ಸಮಾನತೆಯಿಂದ ಬದುಕಬೇಕು ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಶಿವಮರಿಯಪ್ಪ ಮಾತನಾಡಿದರು. ಸಹಾಯಕ ಸರ್ಕಾರಿ ಅಭಿಯೋಜಕಿ ಶಶಿಕಲಾ, ವಕೀಲರಾದ ಪುಟ್ಟಸ್ವಾಮಿಗೌಡ, ಶ್ರೀನಿಧಿ, ರವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net