ಪ್ರತಿಯೊಬ್ಬರಿಗೂ ಕಾನೂನು ಅರಿವು ಅತ್ಯಗತ್ಯ

10rajesh1
Published on

ಚಾಮರಾಜನಗರ: ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕಲು ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅತ್ಯಗತ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಬಿ.ಎಸ್. ಭಾರತಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಆಸರೆ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು, ಮಕ್ಕಳು, ವಿಶೇಷಚೇತನರು ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯಲು ಕಾನೂನು ಅರಿವು ಹೊಂದಬೇಕು. ನಾಗರಿಕರ ರಕ್ಷಣೆಗಾಗಿ ರೂಪಿಸಿರುವ ಕಾನೂನುಗಳನ್ನು ಎಲ್ಲರು ಸದ್ಭಳಕೆ ಮಾಡಿಕೊಳ್ಳಬೇಕು. ಆದರೆ ಎಷ್ಟೋ ಕಡೆ ಕಾನೂನಿನ ದುರ್ಬಳಕೆಯಾಗುತ್ತಿವೆ. ಇದು ಶಾಶ್ವತವಲ್ಲ. ಪ್ರತಿಯೊಬ್ಬರು ಕಾನೂನು ಅರಿವು ಹೊಂದಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ ಮಾತನಾಡಿ,ಕಾನೂನಿನಡಿ ಎಲ್ಲರೂ ಸಮಾನರು. ಯಾವುದೇ ತಾರತಮ್ಯವಿಲ್ಲದೇ ನ್ಯಾಯ ದೊರಕಿಸಲು ರಾಷ್ಟ್ರೀಯ, ರಾಜ್ಯ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳನ್ನು ಸ್ಥಾಪಿಸಲಾಗಿದೆ. ಹಿರಿಯನ್ನು ಗೌರವಿಸಿ ಅವರ ಅನುಭವದ ಮಾತುಗಳನ್ನು ಕೇಳಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಸ್. ನಂಜಯ್ಯ, ಆಸರೆ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಟಿ.ಜೆ. ಸುರೇಶ್,ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಪಿ.ಎಸ್. ಗುರುಪ್ರಸಾದ್,ಹಿಸ್ಟರಿ ಅಸೋಶಿಯೆಟ್ ಪ್ರೊ. ನೀಲಕಂಠಸ್ವಾಮಿ, ಅರ್ಥಶಾಸ್ತ್ರ ಪ್ರಾಧ್ಯಾಪಕ ಮಲ್ಲೇಶ್ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net