

ಹೊಳೆಹೊನ್ನೂರು; ನಾವು ಮಾಡಿದ ಉಪಕಾರ ಮತ್ತು ನಮಗೆ ಪರರು ಮಾಡಿದ ಅಪಕಾರಗಳನ್ನು ಮರೆತಾಗ ಮಾತ್ರ ನೆಮ್ಮದಿಯ ಜೀವನ ಸಾಧ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು. ಹನುಮಂತಾಪುರದಲ್ಲಿ ಮಂಗಳವಾರ ಆಯೋಜಿಸಿದ್ದ ಇಷ್ಟಲಿಂಗ ಪೂಜೆ, ಶಿವದೀಕ್ಷೆ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಮರೆಯದ ಪರೋಪಕಾರಗಳು ಆಂತರಿಕ ಕಲಹಗಳಿಗೆ ದಾರಿಯಾಗುತ್ತವೆ. ಧರ್ಮದ ನೆಲೆ ಆಸರೆ ನೀಡುತ್ತದೆ. ದೇಶದಲ್ಲಿ ಧರ್ಮ, ಜಾತಿಗಳ ನಡುವೆ ಸಂಘರ್ಷಗಳು ತಾರಕಕ್ಕೇರುತ್ತಿವೆ ಎಂದರು. ಕಾರಣವಿಲ್ಲದೆ ಸಮಾಜದಲ್ಲಿ ಯಾವುದೇ ಕಾರ್ಯಗಳು ಜರುಗುವುದಿಲ್ಲ. ಪ್ರತಿಯೊಬ್ಬರಲ್ಲೂ ಧರ್ಮನಿಷ್ಠೆ ಬೆಳೆಯಬೇಕು. ಸಂತೋಷ ಇಲ್ಲವೇ ದುಃಖ ಹೆಚ್ಚಾದಾಗ ಮನುಷ್ಯನಿಗೆ ಮಾತುಗಳು ವೌನವಾಗುತ್ತವೆ. ಧರ್ಮ ಪರಿಪಾಲನೆಯಲ್ಲಿ ಕಷ್ಟದ ದಿನಗಳನ್ನು ಗೆದ್ದಾಗ ಮಾತ್ರ ಸುಖ ಪ್ರಾಪ್ತವಾಗುತ್ತದೆ. ಆಡಂಬರವನ್ನು ಬಿಟ್ಟರೆ ಕಾರ್ಯಸಾಧನೆಗಳು ಮನೆಮಾತಾಗುತ್ತವೆ. ಆಡಿದಂತೆ ನಡೆಯುವುದನ್ನು ರೂಢಿಗೆ ತರಬೇಕು ಎಂದು ಹೇಳಿದರು. ಮನುಷ್ಯನಾಗಿ ಹುಟ್ಟಿದ ಮೇಲೆ ಕೊನೆಯಲ್ಲಿ ಮರಣ ಕಟ್ಟಿಟ್ಟ ಬುತ್ತಿ. ದೇವರಿದ್ದಾನೆ ಎನ್ನುವುದು ಸಾರ್ವಕಾಲಿಕ ಸತ್ಯ. ಭೌತಿಕ ಸಂಪನ್ಮೂಲ ನೀಡಿದ ಭಗವಂತನ ಸ್ಮರಣೆ ಮಾಡಬೇಕು. ದಿನದಲ್ಲಿ ಒಂದೆರಡು ತಾಸು ಪೂಜೆ ಮಾಡಿದರೆ ಜೀವನ ಸಾರ್ಥಕವಾಗುತ್ತದೆ. ಸಾಮರಸ್ಯ ಭಾವ ರಾಷ್ಟ್ರೀಯತೆಗೆ ಶಕ್ತಿ ನೀಡುತ್ತದೆ. ಪ್ರತಿಯೊಂದು ಧರ್ಮಗಳ ಆಚರಣೆ ಬೇರೆಯಾಗಿದ್ದರೂ ಕೊನೆಯ ಗುರಿ ಮಾನವ ಕುಲದ ಉನ್ನತಿಯೇ ಆಗಿರುತ್ತದೆ. ಮನುಷ್ಯ ಭೌತಿಕವಾಗಿ ಉನ್ನತಿಯಾಗಿದ್ದರೂ ಮಾನಸಿಕ ನೆಮ್ಮದಿ ಮಾತ್ರ ಮರೀಚಿಕೆಯಾಗಿದೆ. ನಾಸ್ತಿಕ ಭಾವ ವೃದ್ಧಿಯಾಗಿ ಧರ್ಮಾಚರಣೆ ಮುಖ್ಯವಾಗಬೇಕು. ಉಪಕಾರ ಸ್ಮರಣೆಯನ್ನು ಮರೆಯಬಾರದು. ಧರ್ಮಾಚರಣೆೆಯಲ್ಲಿ ಅಗೋಚರ ಶಕ್ತಿ ಅಡಗಿದೆ ಎಂದು ತಿಳಿಸಿದರು. ಚನ್ನಗಿರಿ ಕೇದಾರ ಶಾಖಾ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ, ಶಿವಮೊಗ್ಗ ಹಾರನಹಳ್ಳಿಯ ರಾಮಲಿಂಗೇಶ್ವರ ಮಠದ ಶ್ರೀ ಶಿವಯೋಗಿ ಶಿವಾಚಾರ್ಯರು, ಕಡೇನಂದಿಹಳ್ಳಿ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯರು, ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಲತಾ ಸೋಮಶೇಖರಯ್ಯ, ಎಚ್.ಆರ್.ಕಾಂತರಾಜ್, ಹಿರಣ್ಣಯ್ಯ, ಎಂ.ಪಾಲಾಕ್ಷಪ್ಪ, ಕಿರಣ್‌ಕುಮಾರ್, ಹಾಲೇಶ್, ರುದ್ರಯ್ಯ, ಶಿವಕುಮಾರ್, ಬಸವರಾಜಪ್ಪ, ಮಹೇಶಪ್ಪ, ಹಾಲೇಶಪ್ಪ, ನಾಗರಾಜ್ ಗೌಡ ಇತರರಿದ್ದರು.
ಧರ್ಮಾಚರಣೆ ಕೈಬಿಡಬೇಡಿ ಮರಣ ಭೀತಿಯನ್ನು ಇಟ್ಟುಕೊಂಡು ಧರ್ಮಾಚರಣೆ ಕೈಬಿಡಬಾರದು. ಜೀವ ಇರುವವರೆಗೆ ಭಗವಂತನ ನಾಮ ಸ್ಮರಣೆ ಮಾಡಬೇಕು. ಧಾರ್ಮಿಕ ರಂಗದಲ್ಲಿ ವೈಮನಸ್ಯ ದೂರವಾಗಬೇಕು. ಧರ್ಮವೆಂದರೆ ಹಸಿದವರಿಗೆ ಅನ್ನದಂತೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಅಭಿಪ್ರಾಯಪಟ್ಟರು. ಮಾನವರಂತೆ ಪ್ರಕೃತಿ, ಧರ್ಮ ಮೀರಿ ನಡೆದರೆ ವಿನಾಶ ಕಟ್ಟಿಟ್ಟ ಬುತ್ತಿ. ಧರ್ಮಾಚರಣೆ ತಲೆಮಾರುಗಳನ್ನು ದಾಟಿ ಸಾಗಬೇಕು. ಆಧುನಿಕ ಯುಗದಲ್ಲಿ ಹಣ, ಅಕಾರದ ಬೆನ್ನುಬಿದ್ದು ತಮ್ಮತನವನ್ನು ಕಳೆದುಕೊಳ್ಳಬಾರದು. ಸಮಸ್ಯೆಗಳಿಗೆ ತಲೆಬಾಗಿ ಆತ್ಮಹತ್ಯೆಗೆ ಶರಣಾಗದೆ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬೇಕು. ಅನ್ನದಾತರು ರೈತಪರ ಹೋರಾಟಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕು ಎಂದರು. ಬಿಳಕಿ ಹಿರೇಮಠ ರಾಜೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀವರ್ಚನ ನೀಡಿ, ಧರ್ಮವೇ ಬಾಳಿನ ಬೆಳಕು. ವೀರಶೈವರು ಇಷ್ಟಲಿಂಗ ಧರಿಸಬೇಕು. ಶಿಕ್ಷಣದೊಂದಿಗೆ ನಮ್ಮ ಧರ್ಮ, ಸಂಸ್ಕೃತಿಯನ್ನು ಕಲಿಸಬೇಕು. ತಂದೆ-ತಾಯಿಗಳನ್ನು ಕಡೆಗಣಿಸಬಾರದು. ಬಹುದಿನದ ಕನಸು ನನಸಾಗುವುದು ದೈವದ ಆಶೀರ್ವಾದವಿದ್ದರೆ ಮಾತ್ರ ಸಾಧ್ಯ. ಧರ್ಮ ಜಾಗೃತಿ ಕಾರ್ಯಕ್ಕೆ ಶ್ಲಾಘನೆ ಸಿಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು. ಬಾಳೆಹೊನ್ನೂರಿನಲ್ಲಿ 12 ಕೋಟಿ ರೂ. ವೆಚ್ಚದಲ್ಲಿ 51 ಅಡಿಯ ರೇಣುಕಾಚಾರ್ಯ ಮೂರ್ತಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇಂದಿನ ಸರ್ಕಾರಗಳು ಯಾವುದೇ ಸಹಕಾರ ನೀಡುತ್ತಿಲ್ಲ. ಆಂಧ್ರದಿಂದ ಬೃಹತ್ ಏಕಶಿಲೆ ತರಿಸಿಕೊಳ್ಳಲಾಗುತ್ತಿದೆ. ಭಕ್ತರು ಸಹಕಾರ ನೀಡಬೇಕು. ಶ್ರೀ ರಂಭಾಪುರಿ ಜಗದ್ಗುರುಗಳು ಬಾಳೆಹೊನ್ನೂರು ವೀರಶೈವ ಧರ್ಮ ಶ್ರೇಷ್ಠವಾದುದು. ಇತ್ತೀಚಿನ ದಿನಗಳಲ್ಲಿ ಧರ್ಮ ಗ್ರಂಥಗಳ ಬಗ್ಗೆ ಮಾಹಿತಿ ಇಲ್ಲವಾಗುತ್ತಿದೆ. ಪ್ರತಿ ಮನೆಯಲ್ಲೂ ಸಿದ್ಧಾಂತ ಶಿಖಾಮಣಿ ಗ್ರಂಥ ಇರುವಂತೆ ನೋಡಿಕೊಳ್ಳಬೇಕು. ಮಕ್ಕಳಲ್ಲಿ ಪಾಶ್ಚಾತ್ಯ ಸಂಸ್ಕೃತಿ ಬೆಳೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಹಿಂದುಗಳು ಆದಷ್ಟು ಕುಂಕುಮವನ್ನು ಧರ್ಮದ ಸಂಕೇತವಾಗಿ ಬಳಸಬೇಕು. ಆಭರಣ ಪ್ರಿಯ ಮಹಿಳೆಯರು ಬಂಗಾರದೊಂದಿಗೆ ಕರಿಮಣಿಗೆ ಒತ್ತು ನೀಡಬೇಕು. ರಾಜೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಬಿಳಕಿ ಹಿರೇಮಠ