ಪ್ರತಿಯೊಬ್ಬರಲ್ಲಿ ಮೂಡಲಿ ಕನ್ನಡಿಗ ಎಂಬ ಪ್ರಜ್ಞೆ

10BK1
ಬಸವಕಲ್ಯಾಣದ ತ್ರಿಪುರಾಂತ ಸಂಸ್ಥಾನ ಗವಿಮಠದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಅಭಿನವ ಘನಲಿಂಗ ರುದ್ರಮಿನಿ ಜಾತ್ರೋತ್ಸವ ಹಾಗೂ ರಾಜ್ಯ ಮಟ್ಟದ ೧೩ನೇ ಚುಟುಕು ಸಾಹಿತ್ಯ ಸಮ್ಮೇಳನವನ್ನು ಸರ್ವಾಧ್ಯಕ್ಷರಾದ ಶ್ರೀ ಡಾ.ರೇವಣಸಿದ್ಧ ಶಿವಾಚಾರ್ಯ ಉದ್ಘಾಟಿಸಿದರು. ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯ, ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ, ಕೃಷ್ಣಮೂರ್ತಿ ಕುಲಕರ್ಣಿ, ಡಾ.ನೀಲಾಂಬಿಕಾ ಪೊಲೀಸ್ ಪಾಟೀಲ್, ಅರ್ಜುನ ಕನಕ, ಸಂಗಮೇಶ ಜವಾದಿ, ಸೂರ್ಯಕಾಂತ ಶೀಲವಂತ, ಮಾಣಿಕಪ್ಪ ಬಿರಾದಾರ, ರಾಕೇಶ ಪುರವಂತ, ಮಲ್ಲಿಕಾರ್ಜುನ ಆಲಗೂಡೆ ಇದ್ದರು.
Published on

ಬಸವಕಲ್ಯಾಣ: ಸಾಹಿತ್ಯ ಓದುವವರ ಸಂಖ್ಯೆ ಬೆಳೆಯುವುದರ ಜತೆಗೆ ನಾಡಿನ ಪ್ರತಿಯೊಬ್ಬರಲ್ಲಿ ನಾನು ಕನ್ನಡಿಗ ಎಂಬ ಪ್ರಜ್ಞೆ, ಹೆಮ್ಮೆ ಮೂಡುವ ಅಗತ್ಯವಿದೆ ಎಂದು ಶ್ರೀನಿವಾಸ ಸರಡಗಿ ಸಂಸ್ಥಾನ ಹಿರೇಮಠದ ಶ್ರೀ ಡಾ.ರೇವಣಸಿದ್ಧ ಶಿವಾಚಾರ್ಯ ನುಡಿದರು.

ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯ ಟ್ರಸ್ಟ್ ಸಹಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಡಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್‌ನಿಂದ ತ್ರಿಪುರಾಂತನ ಸಂಸ್ಥಾನ ಗವಿಮಠದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಘನಲಿಂಗ ರುದ್ರಮುನಿ ಜಾತ್ರೋತ್ಸವ, ಅಭಿನವ ಶ್ರೀ ಪ್ರಶಸ್ತಿ ಪ್ರದಾನ ಹಾಗೂ ರಾಜ್ಯ ಮಟ್ಟದ ೧೩ನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷೀಯ ಭಾಷಣ ಮಾಡಿದ ಅವರು, ತಮ್ಮನ್ನು ಈ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದು ಖುಷಿ ತಂದಿದೆ ಎಂದರು.

ಸಣ್ಣ ಸಣ್ಣ ಚರ್ಚೆ, ವಿಚಾರ ವಿನಿಮಯ, ಕಾವ್ಯಾನ್ವೇಷಣೆ, ಸಾಹಿತ್ಯ ಕೃತಿಯ ಸೂಕ್ಷ್ಮ ವಿಶ್ಲೇಷಣೆ, ಚಿಂತನ ಗೋಷ್ಠಿ, ಸಂವಾದದಂಥ ಕಾರ್ಯಕ್ರಮಗಳು ಸಾಹಿತ್ಯ ಓದುಗರ ಸೃಷ್ಟಿಗೆ ಪೂರಕವಾಗಿವೆ. ಕನ್ನಡವೆಂದರೆ ಕಥೆ, ಕವಿತೆ, ಭಾಷೆ ಮಾತ್ರವಲ್ಲ, ಸಂಸ್ಕೃತಿ ಮತ್ತು ಜೀವನಶೈಲಿ. ಹೀಗಾಗಿ ಕರ್ನಾಟಕದಲ್ಲಿರುವ ಎಲ್ಲರೂ ಕನ್ನಡಿಗರು. ಕನ್ನಡಿಗ ಎಂಬ ಪ್ರಜ್ಞೆ ಸದಾ ನಮ್ಮಲ್ಲಿರಲಿ ಎಂದು ಆಶಿಸಿದರು.

ಕಲ್ಯಾಣ ಕ್ರಾಂತಿಯ ಯುಗಪುರುಷ ಬಸವಣ್ಣನವರು ಅನುಭವ ಮಂಟಪದಲ್ಲಿ ಶರಣ-ಶರಣೆಯರಿಗೆ ಸಮಾನ ವೇದಿಕೆ ಕಲ್ಪಿಸಿದ್ದರು. ಕಲ್ಯಾಣ ಕರ್ನಾಟಕದಲ್ಲಿ ದೇಶ ಸ್ವಾತಂತ್ರ್ಯ ಸಂದರ್ಭದಲ್ಲಿ ಹೈದರಾಬಾದ್ ನಿಜಾಮನ ಆಳ್ವಿಕೆ ಇದ್ದುದರಿಂದ ಉರ್ದು ಭಾಷೆ ಪ್ರಭಾವ ಇತ್ತು. ಅಂದು ಭಾಲ್ಕಿಯ ಲಿಂಗೈಕ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಹೊರಗೆ ಉರ್ದು ಫಲಕ ಹಾಕಿ ಒಳಗೆ ಕನ್ನಡ ಕಲಿಸಿದ್ದರು. ಹೀಗಾಗಿ ಭಾಲ್ಕಿ ಹಿರೇಮಠ ಅಕ್ಷರದ ಮಠವಾಗಿದೆ. ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಈ ಭಾಗದಲ್ಲಿ ಧಾರ್ಮಿಕ ಕಾರ್ಯಗಳ ಜತೆಗೆ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಸಾಹಿತಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಕೊಂಡಾಡಿದರು.

ಚುಟುಕು ಸಾಹಿತ್ಯ ಬದುಕಿಗೆ ಬೆಳಕಾಗಿದೆ. ಸಾಹಿತ್ಯವು ಶರಣರ ವಚನ, ಜನಪದ ತ್ರಿಪದಿಗಳ ಮೂಲದಿಂದ ಬಂದ ಜೀವಂತ ಸಾಹಿತ್ಯ. ಸಮಾನತೆಗಾಗಿ ಅಂದು ಕಲ್ಯಾಣದಲ್ಲಿ ನಡೆದಿದ್ದ ಆಂದೋಲನ ಎಲ್ಲರಿಗೂ ಪ್ರೇರಣೆಯಾಗಬೇಕು. ಮಾನವೀಯ ಮೌಲ್ಯದ ಹೊಸ ಸಮಾಜ ನಿರ್ಮಾಣ ಕಾರ್ಯದಲ್ಲಿ ಯುವ ಜನಾಂಗ ತೊಡಗಬೇಕು ಎಂದು ಹಿತೋಪದೇಶ ನೀಡಿದರು.

ಸಾಹಿತ್ಯ ಸಮ್ಮೇಳನಗಳು ಸಮಾಜಕ್ಕೆ ಮಾರ್ಗದರ್ಶಿಯಾಗಬೆಕು. ಸಮ್ಮೇಳನಗಳಿಂದ ಆ ಪ್ರದೇಶದ ಅಭಿವೃದ್ಧಿ ಸಾಧ್ಯ. ಕಲ್ಯಾಣದಲ್ಲಿ ಪ್ರಮುಖ ಹೆದ್ದಾರಿ, ರಸ್ತೆಗಳು ನಿರ್ಮಾಣವಾಗಬೇಕು. ದೊಡ್ಡ ದೊಡ್ಡ ಕೈಗಾರಿಕೆಗಳು ನೆಲೆ ಕಾಣಬೇಕು. ಸಾಹಿತಿಗಳನ್ನು ಗುರುತಿಸಿ ಗೌರವ ಧನ, ಪ್ರಶಸ್ತಿ, ಪುರಸ್ಕಾರ ನೀಡಿ ಪ್ರೋತ್ಸಾಹಿಸುವ ಕೆಲಸ ಸರ್ಕಾರದಿಂದ ನಿರಂತರ ನಡೆಯಬೇಕು.

| ಶ್ರೀ ಡಾ.ರೇವಣಸಿದ್ಧ ಶಿವಾಚಾರ್ಯ

ಸರ್ವಾಧ್ಯಕ್ಷರು, ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net