ಪ್ರತಿಯೊಬ್ಬ ಅಂಧರಲ್ಲಿ ವಿಶೇಷ ಜ್ಞಾನ, ಕೌಶಲ ಅಡಗಿದೆ:ಡಾ. ಬಿ. ಸುಧೀರ್ ಅಭಿಮತ

ಪ್ರತಿಯೊಬ್ಬ ಅಂಧರಲ್ಲಿ ವಿಶೇಷ ಜ್ಞಾನ, ಕೌಶಲ ಅಡಗಿದೆ:ಡಾ. ಬಿ. ಸುಧೀರ್ ಅಭಿಮತ
Published on

 ಹಾಸನ: ದೃಷ್ಟಿದೋಷವುಳ್ಳ ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಶೇಷ ಜ್ಞಾನ ಮತ್ತು ಕೌಶಲವಿದೆ. ಸಮಾಜದಲ್ಲಿ ಸಾಕಷ್ಟು ಅಂಧರು ತಮ್ಮ ವಿಶೇಷ ಕೌಶಲ ಮತ್ತು ಪ್ರತಿಭೆಯಿಂದ ಸಾಧನೆ ಮಾಡಿದ್ದಾರೆ ಹಾಗೂ ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ ಎಂದು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಅಧ್ಯಕ್ಷ ಡಾ. ಬಿ. ಸುಧೀರ್ ಹೇಳಿದರು.

ನಗರದ ರೋಟರಿ ಸುವರ್ಣ ಭವನದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್, ಶಿಲ್ಪಾ ನಾಗೇಂದ್ರನ್ ಆಂಡ್ ಧ್ಯುತಿ ಚಾರಿಟಬಲ್ ಟ್ರಸ್ಟ್, ವಿಕಲಚೇತನರ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ರಾಷ್ಟ್ರೀಯ ಅಂಧರ ಸಂಸ್ಥೆ, ರೋಟರಿ ಕ್ಲಬ್ ಆಫ್ ಹಾಸನ ಮಿಡ್ ಟೌನ್, ರೋಟರಿ ಸನ್ ರೈಸ್, ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಸೋಮವಾರ ಅಂಧರಿಗೆ ಹಮ್ಮಿಕೊಂಡಿದ್ದ 5 ದಿನಗಳ ಸ್ಥಳ ಪರಿಜ್ಞಾನ ಮತ್ತು ಚಲನವಲನ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನನಗೆ ಕಣ್ಣು ಕಾಣುವುದಿಲ್ಲ. ನನ್ನ ಕೈಯಲ್ಲಿ ಏನು ಕೆಲಸ ಮಾಡಲು ಆಗುವುದಿಲ್ಲ ಎಂಬ ಭಯದಿಂದ ಮನೆಯಲ್ಲಿ ಕುಳಿತುಕೊಳ್ಳುವ ಬದಲು, ತರಬೇತಿ ಪಡೆದುಕೊಂಡು ದೈರ್ಯದಿಂದ ಅಂಧರು ತಮಗೆ ಇಷ್ಟವಾಗುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.

ರೋಟರಿ ಮಿಡ್ ಟೌನ್ ಮಾಜಿ ಅಧ್ಯಕ್ಷರಾದ ರೊ. ಮಮತಾ ಪಾಟೀಲ್ ಅವರು ಮಾತನಾಡಿ, ಸರ್ಕಾರದ ನೆರವು ಪಡೆಯದೆ ಸ್ಥಳೀಯ ದಾನಿಗಳ ಮತ್ತು ವಿವಿಧ ಸಂಘ-ಸಂಸ್ಥೆಗಳ ಸಹಕಾರ ಪಡೆದು ಕಳೆದ 2 ವರ್ಷಗಳಿಂದ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆ ಅಂಧ ವಿಶೇಷ ಚೇತನರಿಗೆ ಸ್ಥಳ ಪರಿಜ್ಞಾನ ಮತ್ತು ಚಲನವಲನ ತರಬೇತಿ ನೀಡುತ್ತಿದೆ. ಸರ್ಕಾರ ವಿಶೇಷ ಚೇತನರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಸದುಪಯೋಗಪಡಿಸಿಕೊಂಡು ಸ್ವಾವಲಂಬಿಗಳಾಗಿ ಬದುಕುವಂತೆ ಅಂಧರಿಗೆ ಕರೆ ನೀಡಿದರು.

ರೋಟರಿ ಕ್ಲಬ್ ಆಫ್ ಹಾಸನ ಮಿಡ್ ಟೌನ್, ರೋಟರಿ ಸನ್ ರೈಸ್ ಮತ್ತು ರೋಟರಿ ಕ್ಲಬ್ ಹಾಸನ ಇವರ ಆರ್ಥಿಕ ನೆರವಿನಿದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 27 ಜನ ಅಂಧರಲ್ಲಿ 20 ಜನ ಅಂಧರಿಗೆ 20 ಉದ್ದನೆಯ ಬಿಳಿ ಬೆತ್ತ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜೀವ್ ಎಂಬಿಎ ಕಾಲೇಜಿನ ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥರಾದ ಬಿ.ಎಸ್. ಭವಾನಿ, ವಿಶೇಷ ಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ನಗರ ಪುನರ್ವಸತಿ ಕಾರ್ಯಕರ್ತರಾದ ಸುಷ್ಮಾ, ಇಮ್ರಾನ್, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಜಿಲ್ಲಾ ಸಂಯೋಜಕ ಎಂ.ಎಚ್.ಯೋಗನಾಥ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net