ಪ್ರತಿಭೆಗೆ ಪ್ರೋತ್ಸಾಹಿಸುವ ಜವಾಬ್ದಾರಿ ಶಿಕ್ಷಕರದ್ದು

23kmr1
Published on

ಕಮಲನಗರ: ಪ್ರತಿಭಾ ಕಾರಂಜಿ ಎಂಬುದು ಕಲಾ ಪ್ರತಿಭೆಗಳ ಚಿಣ್ಣರ ಹಬ್ಬ. ಪಾಲಕರು, ಸಾರ್ವಜನಿಕರು ಖುಷಿ ಪಡುವ ಹಬ್ಬ. ಮಕ್ಕಳ ಪ್ರತಿಭೆ ಹತ್ತಿರದಿಂದ ಕಣ್ತುಂಬಿಕೊಳ್ಳುವ ವೇದಿಕೆ. ಸುಪ್ತ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವ ಗುರುತರ ಜವಾಬ್ದಾರಿ ಪಾಲಕರು, ಶಿಕ್ಷಕರ ಮೇಲಿದೆ ಎಂದು ಡಾ.ಎಸ್.ಎಸ್.ಮೈನಾಳೆ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಕಮಲನಗರ ಸಮೂಹ ಸಂಪನ್ಮೂಲ ಕೇಂದ್ರದಿಂದ ಶುಕ್ರವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಭಾ ಕಾರಂಜಿ ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದವರೆಗೆ ಇರುವುದರಿಂದ ಶಿಕ್ಷಕರು ಉತ್ತಮ ತರಬೇತಿ ನೀಡಿ ಮಕ್ಕಳನ್ನು ಸಜ್ಜುಗೊಳಿಸಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ಸುಶೀಲಾ ಸಜ್ಜನಶೆಟ್ಟಿ ಮಾತನಾಡಿ, ಸ್ಥಳೀಯ ಜನಪದ ನೃತ್ಯ ಮತ್ತು ಗಾಯನ, ಚಿತ್ರಕಲೆ, ಪ್ರಬಂಧ, ಚರ್ಚಾಸ್ಪರ್ಧೆ, ಏಕಪಾತ್ರಾಭಿನಯ, ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳು ಅನೇಕ ಕಲಾತ್ಮಕ ಸಾಂಸ್ಕೃತಿಕ ಚಟುವಟಿಕೆಗಳು ಪ್ರತಿಭಾ ಕಾರಂಜಿ ವ್ಯಾಪ್ತಿಯಲ್ಲಿ ಬರುತ್ತವೆ. ಇದರಿಂದ ವಿದ್ಯಾರ್ಥಿಗಳಲ್ಲಿ ಕಲಾಭಿರುಚಿಯ ಸಾಮರ್ಥ್ಯ ಹೆಚ್ಚುತ್ತದೆ ಎಂದರು.

ಸಿಆರ್‌ಪಿ ನಾಗೇಶ ಸಂಗಮೆ ಮಾತನಾಡಿ, ಪ್ರತಿ ಮಗುವಿನಲ್ಲಿ ಜ್ಞಾನ, ಕಲೆ ಇರುತ್ತದೆ. ಅದನ್ನು ತೋರಿಸಲೆಂದೆ ಸರ್ಕಾರ ಪ್ರತಿಭಾ ಕಾರಂಜಿ ಕಾರ್ಯಕ್ರಮ ರೂಪಿಸಿದೆ ಎಂದರು.

20 ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಪಾಟೀಲ್, ಕಸಾಪ ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ, ಯಶವಂತ ಬಿರಾದಾರ, ವೀರಭದ್ರಪ್ಪ ಸಜ್ಜನಶೆಟ್ಟಿ, ಮಹೇಶ ಪಾಟೀಲ್ ಮಹಾದೇವ ಮಡಿವಾಳ, ಸುವರ್ಣಾ ಝುಲ್ಪೆ, ರಾಮರಾವ ತೇಗಂಪುರೆ ಇತರರಿದ್ದರು. ಶ್ರೀನಿವಾಸ ಮಂಠಾಳೆ ಸ್ವಾಗತಿಸಿದರು. ಮಡಿವಾಳಪ್ಪ ಮಹಾಜನ ವಂದಿಸಿದರು. ಉಮಾಕಾಂತ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net