ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯ

17blk2
 ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಗಾಯಕಿ ಶಿವಾನಿ ಶಿವದಾಸ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರು, ಶಶಿಧರ ಕೋಸಂಬೆ, ನಾಗಭೂಷಣ ಮಾಮಡಿ ರವೀಂದ್ರ ಚಿಡಗುಪ್ಪೆ, ಸತೀಶ ಧರ್ಮಣ್ಣ, ಬಾಬು ಬೆಲ್ದಾಳ, ಕಲಾವತಿ ಶಿವದಾಸ ಸ್ವಾಮಿ ಇದ್ದರು.
Published on

ಭಾಲ್ಕಿ: ಗಡಿ ಜಿಲ್ಲೆ ಬೀದರ್‌ನಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಅಂತವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ನ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಮಂಗಳವಾರ ಸರಿಗಮಪ ೨೧ರ ಸೀಸನ್‌ಗೆ ಆಯ್ಕೆಯಾಗಿರುವ ಗಾಯಕಿ ಶಿವಾನಿ ಶಿವದಾಸ ಸ್ವಾಮಿ ಅವರನ್ನು ಸನ್ಮಾನಿಸಿ ಮಾತನಾಡಿದ ಶ್ರೀಗಳು, ಶ್ರೀಮಠದ ಪರಮ ಭಕ್ತರು ಆಗಿರುವ ಶಿವಾನಿ ಶಿವದಾಸ ಸ್ವಾಮಿ ಪರಿವಾರ ಸುಸಂಸ್ಕೃತ ಮನೆತನದಿಂದ ಕೂಡಿದೆ. ಎಲ್ಲರೂ ಶ್ರದ್ಧೆ, ಭಕ್ತಿಯಿಂದ ಸಂಗೀತ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅ ಪರಿವಾರದ ಶಿವಾನಿ ಗಾಯಕಿಯಾಗಿ ಬೆಳೆಯುತ್ತಿದ್ದು ಹೆಮ್ಮೆ ತರಿಸಿದೆ. ಈಗಾಗಲೇ ಇಂಡಿಯನ್ ಐಡಿಯಲ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರಿರುವ ಶಿವಾನಿ ಸ್ವಾಮಿ ಪ್ರಸ್ತುತ ಸರಿಗಮಪ ೨೧ರ ಸೀಸನ್ ಆಯ್ಕೆಯಾಗುವ ಮೂಲಕ ಗಡಿ ಭಾಗದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಗಾಯಕಿ ಶಿವಾನಿ ಸ್ವಾಮಿ ಉತ್ತಮ ಪ್ರದರ್ಶನ ತೋರಿ ಈ ಭಾಗದ ಕೀರ್ತಿ ಮತ್ತಷ್ಟು ಹೆಚ್ಚಿಸಲಿ ಎಂದು ಹಾರೈಸಿದರು.

ನೇತೃತ್ವ ವಹಿಸಿದ್ದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಗಾಯಕಿ ಶಿವಾನಿ ಶಿವದಾಸ ಸ್ವಾಮಿ ಸಂಗೀತ ಕ್ಷೇತ್ರದಲ್ಲಿ ಉತ್ತಮ ಗಾಯಕಿಯಾಗಿ ಬೆಳೆಯುತ್ತಿರುವುದು ಸಂತಸ ತರಿಸಿದೆ ಎಂದು ಹೇಳಿದರು.

ಶ್ರೀ ಮಹಾಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ, ರವೀಂದ್ರ ಚಿಡಗುಪ್ಪೆ, ಸತೀಶ ಧರ್ಮಣ್ಣ, ಕಲಾವತಿ ಶಿವದಾಸ ಸ್ವಾಮಿ ಇತರರಿದ್ದರು. ಬಾಬು ಬೆಲ್ದಾಳ ನಿರೂಪಣೆ ಮಾಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net