

ಬೀದರ್: ಎಲೆಮರೆ ಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸುವ ವಿನೂತನ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸುತ್ತಿದೆ ಎಂದು ಹಿರಿಯ ಸಾಹಿತಿ ಸಾಧನಾ ರಂಜೋಳಕರ್ ಹೇಳಿದರು.
ಕಸಾಪ ಜಿಲ್ಲಾ ಮತ್ತು ತಾಲೂಕು ಘಟಕದಿಂದ ನಗರದಲ್ಲಿ ಶನಿವಾರ ಆಯೋಜಿಸಿದ ಮನೆಯಂಗಳದಲ್ಲಿ ಮಾತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗಡಿ ಜಿಲ್ಲೆ ಬೀದರ್ ನಲ್ಲಿ ಹಲವಾರು ಪ್ರತಿಭೆಗಳಿದ್ದಾರೆ. ಅವರಿಗೆ ಸೂಕ್ತ ವೇದಿಕೆ ಕಲ್ಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪರಿಷತ್ ಉತ್ತಮ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೆ 50 ವರ್ಷಗಳು ತುಂಬಿರುವ ಕಾರಣಕ್ಕೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅನೇಕ ಕೃತಿಗಳನ್ನು ಸಹ ಹೊರತರುವ ಪ್ರಯತ್ನ ನಡೆದಿದೆ ಎಂದು ಹೇಳಿದರು.
ಸಾಹಿತಿ ಪುಷ್ಪಾ ಕನಕ ಮಾತನಾಡಿ, 8ನೇ ತರಗತಿಯಲ್ಲಿದ್ದಾಗ ನಾನು ಬರವಣಿಗೆ ಆರಂಭಿಸಿದೆ. ನನ್ನ ಸಾಹಿತ್ಯಕ್ಕೆ ಧನಶ್ರೀ ಮಾಣಿಕರಾವ್ ಅವರು ಪ್ರೇರಣೆಯಾಗಿದ್ದರು. ವಚನ, ವಚನ ಸುಮ, ಪುಟಾಣಿ ಬಯಕೆ, ಹನಿ ಮಂಜರಿ ಪುಸ್ತಕ ಸಾಹಿತ್ಯಲೋಕಕ್ಕೆ ಅರ್ಪಿತಗೊಂಡಿವೆ ಎಂದರು.
ಕಸಾಪ ತಾಲೂಕಾಧ್ಯಕ್ಷ ಎಂ.ಎಸ್. ಮನೋಹರ ಅಧ್ಯಕ್ಷತೆ ವಹಿಸಿದ್ದರು. ರೇಣುಕಾ ಮಠ, ಗುಂಡಪ್ಪಾ ಕನಕ, ವೀರೇಶ್ವರಿ ಮೂಲಗೆ, ಶ್ವೇತಾ ಕನಕ, ಸುಮೀತ ಕನಕ, ರತ್ನಮ್ಮ, ಮಂಗಲಾ ಚನ್ನಶೆಟ್ಟಿ, ಮಂಗಲಾ ಇದ್ದರು. ಮೇನಕಾ ಪಾಟೀಲ್ ಸ್ವಾಗತಿಸಿದರು. ಕಲ್ಯಾಣರಾವ ಚಳಕಾಪುರೆ ನಿರೂಪಣೆ ಮಾಡಿದರು. ಶಿವಕುಮಾರ ಚನ್ನಶೆಟ್ಟಿ ವಂದಿಸಿದರು.