ಪ್ರತಿಭೆ ಹೊರ ತರಲು ತರಬೇತಿ ಶಿಬಿರಗಳು ಸಹಕಾರಿ

17
Published on

ಮೈಸೂರು: ಪ್ರತಿಯೊಬ್ಬರಲ್ಲಿ ಒಂದು ಶಕ್ತಿ ಇದ್ದು, ಜೊತೆಗೊಬ್ಬ ಕಲಾವಿದ ಇರುತ್ತಾನೆ. ಆದರೆ ಅದನ್ನು ಹೊರ ತರಲು ತರಬೇತಿ ಶಿಬಿರಗಳು ಸಹಕಾರಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಹೇಳಿದರು.
ದೇಸಿ ರಂಗ ಸಾಂಸ್ಕೃತಿಕ ಸಂಸ್ಥೆಯಿಂದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ರಂಗ ಮತ್ತು ನೃತ್ಯೋತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇವಲ ಪಠ್ಯಚಟುವಟಿಕೆಗಳಿಂದ ವ್ಯಕ್ತಿತ್ವ ವಿಕಸನ ಆಗುವುದಿಲ್ಲ. ಹೀಗಾಗಿ ಎಲ್ಲ್ಲ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಪೋಷಕರು ಕೂಡ ಇದಕ್ಕೆ ಉತ್ತೇಜನ ನೀಡಬೇಕು. ತಂತ್ರಜ್ಞಾನ ಎಷ್ಟು ಬೇಕೋ ಅಷ್ಟು ಉಪಯೋಗ ಮಾಡಬೇಕು. ಮೊಬೈಲ್ ಸೇರಿದಂತೆ ಯಾವುದನ್ನೂ ಕೂಡ ಅತಿಯಾಗಿ ಅವಲಂಬಿಸಬಾರದು. ಅವಿಲ್ಲದೆಯೂ ಜೀವಿಸುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.
20 ವರ್ಷಗಳ ಹಿಂದೆ ರಂಗಾಯಣದ ಅಂಗಳದಲ್ಲಿ ಓಡಾಡುತ್ತಿದ್ದ ದರ್ಶನ್, ಚಿಣ್ಣರ ಅಂಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದ ಯಶ್ ಕೂಡ ದೊಡ್ಡ ನಟ. ಡಾಲಿ ಧನಂಜಯ, ರಘು, ಮಂಡ್ಯ ರಮೇಶ್- ಇವರೆಲ್ಲಾ ರಂಗಾಯಣದ ಕೊಡುಗೆಗಳೇ. ಹಾಗಾಗಿ ಕಲೆ ಎಲ್ಲರನ್ನೂ ಆಹ್ವಾನಿಸುತ್ತದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉತ್ಸವ ಉದ್ಘಾಟಿಸಿದರು. ಉಪನ್ಯಾಸಕಿ ಬಿ.ಎಸ್. ದಿನಮಣಿ ಶಿಬಿರದ ನಿರ್ದೇಶಕ ಕೃಷ್ಣ ಜನಮನ ಮಾತನಾಡಿದರು. ಶಿಬಿರಾರ್ಥಿಗಳು ಜನಪದ ಗೀತೆಗಳನ್ನು ಹಾಡಿದರು. ಡೊಳ್ಳು ಕುಣಿತ, ಪೂಜಾ ಕುಣಿತ, ಕಂಸಾಳೆ, ಕೋಲಾಟ. ಮಾರಿ ಕುಣಿತ, ನೃತ್ಯ ಪ್ರದರ್ಶನ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net