

ಬೀದರ್: ಪ್ರತಿಯೊಬ್ಬರೂ ತಮ್ಮೊಳಗಿನ ಪ್ರತಿಭೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಹೇಳಿದರು.
ತಾಲ್ಲೂಕಿನ ಗೋರನಳ್ಳಿಯ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂ.ಬಿ.ಎ. ವಿಭಾಗದ ವತಿಯಿಂದ ನಡೆದ ಮ್ಯಾನೇಜ್‍ಮೆಂಟ್ ಫೆಸ್ಟ್ ಉದ್ಘಾಟಿಸಿ ಅವರು ಮಾತನಾಡಿ, ಎಲ್ಲರಲ್ಲೂ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ. ಹೀಗಾಗಿ ಅದನ್ನು ಗುರುತಿಸಬೇಕು. ಅದಕ್ಕೆ ಪೂರಕವಾದ ಶಿಕ್ಷಣ ಪಡೆದು ಗುರಿಯೆಡೆಗೆ ಸಾಗಬೇಕು ಎಂದು ತಿಳಿಸಿದರು.
ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್ ಮಾತನಾಡಿ, ವಿದ್ಯಾರ್ಥಿನಿಯರು ಪ್ರತಿಯೊಂದರಲ್ಲೂ ಮೇಲುಗೈ ಸಾಧಿಸುತ್ತಿದ್ದಾರೆ. ಇದಕ್ಕೆ ಅವರ ಸತತ ಪ್ರಯತ್ನವೇ ಕಾರಣ ಎಂದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಮಾತನಾಡಿ, ಡಾ. ಶರಣಬಸವಪ್ಪ ಅಪ್ಪ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಸ್ಪರ್ಧಾತ್ಮಕ ಶಿಕ್ಷಣ ಕೊಡಲಾಗುತ್ತಿದೆ. ಕ್ಯಾಂಪಸ್ ಸಂದರ್ಶನ ಆಯೋಜಿಸಿ ಉದ್ಯೋಗಾವಕಾಶವನ್ನೂ ದೊರಕಿಸಿಕೊಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಾಚಾರ್ಯೆ ಡಾ. ವಿನಿತಾ ಬಿ. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರಚಲಿತ ಬೆಳವಣಿಗೆಗಳ ಮಾಹಿತಿ ಒದಗಿಸಲು ಕಾಲೇಜಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜು ನಿರ್ದೇಶಕ ಶರಣಬಸಪ್ಪ ದೇಶಮುಖ, ಡಾ. ಉಮಾ ಬಿ. ದೇಶಮುಖ ಉಪಸ್ಥಿತರಿದ್ದರು. ಡಾ. ಭದ್ರಪ್ಪ ಹರಳಯ್ಯ ಸ್ವಾಗತಿಸಿದರು. ಪ್ರೊ. ತರಂಗಿಣಿ ನಿರೂಪಿಸಿದರು. ಪ್ರೊ. ಅಮರನಾಥ ವಂದಿಸಿದರು.