ಪ್ರತಿಭೆ ಪ್ರೋತ್ಸಾಹಿಸುವ ಜವಾಬ್ದಾರಿ ಶಿಕ್ಷಕರದು

ಕಮಲನಗರದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು. ಸರ್ಕಾರಿ ನೌಕರ ಸಂಘದ ಔರಾದ್ ತಾಲೂಕು ಅಧ್ಯಕ್ಷ ಪಂಢರಿ ಆಡೆ, ಡಾ.ಎಸ್.ಎಸ್.ಮೈನಾಳೆ, ಪ್ರಶಾಂತ ಮಠಪತಿ, ಬಸವರಾಜ ಪಾಟೀಲ್, ನಾಗೇಶ ಸಂಗಮೆ, ವಿದ್ಯಾಸಾಗರ ಪಾಂಚವರೆ, ಶಾಂತಕುಮಾರ ಗುಡಮೆ, ವಿಜಯಕುಮಾರ ನುದನೂರೆ, ಆಶಾಬಿ ಮುಜಾವರ್ ಇತರರಿದ್ದರು.
Published on

ಕಮಲನಗರ: ಪ್ರತಿಭಾ ಕಾರಂಜಿ ಎಂಬುದು ಕಲಾ ಪ್ರತಿಭೆಗಳ ಚಿಣ್ಣರ ಹಬ್ಬ. ಪೋಷಕರಿಗಲ್ಲದೇ ಸಾರ್ವಜನಿಕರು ಖುಷಿ ಪಡುವ ಹಬ್ಬ. ಮಕ್ಕಳ ಪ್ರತಿಭೆಯನ್ನು ಹತ್ತಿರದಿಂದ ಕಣ್ತುಂಬಿಕೊಳ್ಳುವ ವೇದಿಕೆಯಾಗಿದ್ದು, ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಗುರುತರ ಜವಾಬ್ದಾರಿ ಪೋಷಕರು ಹಾಗೂ ಶಿಕ್ಷಕರ ಮೇಲಿದೆ ಎಂದು ಡಾ.ಎಸ್.ಎಸ್.ಮೈನಾಳೆ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಕಮಲನಗರ ಸಮೂಹ ಸಂಪನ್ಮೂಲ ಕೇಂದ್ರದಿಂದ ಮಂಗಳವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಭಾ ಕಾರಂಜಿ ಕಾರ್ಯಕ್ರಮವು ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದವರೆಗೆ ಸ್ಪರ್ಧೆ ಇರುವುದರಿಂದ ಶಾಲೆ ಶಿಕ್ಷಕರು ಉತ್ತಮ ತರಬೇತಿ ನೀಡಿ ಮಕ್ಕಳನ್ನು ಸಜ್ಜುಗೊಳಿಸಬೇಕು. ಮನೋರಂಜನಾತ್ಮಕ ಕಾರ್ಯಕ್ರಮದಿಂದ ಶೈಕ್ಷಣಿಕ ಗುಣಮಟ್ಟದ ಫಲಿತಾಂಶಕ್ಕೂ ಸಹಕಾರಿಯಾಗಲಿದೆ ಎಂದರು.

ಸರ್ಕಾರಿ ನೌಕರ ಸಂಘದ ಔರಾದ್ ತಾಲೂಕು ಅಧ್ಯಕ್ಷ ಪಂಢರಿ ಆಡೆ ಮಾತನಾಡಿ, ಸ್ಥಳೀಯ ಜನಪದ ನೃತ್ಯ ಮತ್ತು ಗಾಯನ, ಚಿತ್ರಕಲೆ, ಪ್ರಬಂಧ, ಚರ್ಚಾಸ್ಪರ್ಧೆ, ಏಕಪಾತ್ರಾಭಿನಯ, ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳು ಅನೇಕ ಕಲಾತ್ಮಕ ಸಾಂಸ್ಕೃತಿಕ ಚಟುವಟಿಕೆಗಳು ಪ್ರತಿಭಾ ಕಾರಂಜಿ ವ್ಯಾಪ್ತಿಯಲ್ಲಿ ಬರುವುದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಜತೆಗೆ ವಿದ್ಯಾರ್ಥಿಗಳಲ್ಲಿ ಕಲಾಭಿರುಚಿಯ ಸಾಮರ್ಥ್ಯ ಸಾಬೀತು ಮಾಡಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದರು.

ಸಿಆರ್‌ಪಿ ನಾಗೇಶ ಸಂಗಮೆ ಮಾತನಾಡಿ, ಪ್ರತಿಯೊಂದು ಮಗುವಿನಲ್ಲಿ ಒಂದೊಂದು ರೀತಿಯ ಜ್ಞಾನ, ಕಲೆ ಇರುತ್ತದೆ. ಅದನ್ನು ತೋರಿಸಲೆಂದೆ ಸರ್ಕಾರ ಪ್ರತಿಭಾ ಕಾರಂಜಿ ಕಾರ್ಯಕ್ರಮ ರೂಪಿಸಿದೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಪಾಟೀಲ್ ಮಾತನಾಡಿದರು. ಪಿಡಿಒ ರಾಜಕುಮಾರ ತಂಬಾಕೆ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಪರಿಷತ್ ಸದಸ್ಯ ವಿದ್ಯಾಸಾಗರ ಪಾಂಚವರೆ, ಶಾಂತಕುಮಾರ ಗುಡಮೆ, ವಿಜಯಕುಮಾರ ನುದನೂರೆ, ಭಾವುರಾವ ಹೇಡೆ, ಮಹೇಶ ಸಜ್ಜನ್, ಆಶಾಬಿ ಮುಜಾವರ್, ಮಹಾದೇವ ಮಡಿವಾಳ, ಮೆಹರ್ ಸುಲ್ತಾನಾ, ಮುಖ್ಯಗುರು ಮೆಹಮೂದ್ ಇತರರಿದ್ದರು. ಆಕಾಶ ಜಾಧವ ಸ್ವಾಗತಿಸಿದರು. ಸುನಿತಾ ಪಟವಾರಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net