

ಮಂಡ್ಯ: ಮಕ್ಕಳಲ್ಲಿ ಅಡಗಿರುವ ಆಂತರಿಕ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ, ಸಾಂಸ್ಕೃತಿಕ, ಕಲೋತ್ಸವ ಸ್ಪರ್ಧೆ ಉತ್ತಮ ವೇದಿಕೆ ಎಂದು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ಹೇಳಿದರು.
ಇಲ್ಲಿನ ಶಂಕರನಗರದ ಗೀತಾ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಶಿಕ್ಷಣ ಇಲಾಖೆ, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಗೀತಾ ಪ್ರೌಢಶಾಲೆ ಸಹಯೋಗದಲ್ಲಿ ಆಯೋಜಿಸಿದ್ದ ಪ್ರೌಢಶಾಲೆಗಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣ, ಕ್ರೀಡೆ ಕೊಟ್ಟರೆ ಸಾಲದು. ಅವರಲ್ಲಿ ಆಂತರಿಕವಾಗಿ ಅಡಗಿರುವ ಪ್ರತಿಭೆಯನ್ನು ಹೊರತರುವ ಕೆಲಸವನ್ನು ಮಾಡಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳನ್ನು ಶೇಕಡಾವಾರು ಅಂಕಗಳಲ್ಲಿ ಗುರುತಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಬದಲಿಗೆ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಉತ್ತಮ ಭವಿಷ್ಯ ರೂಪಿಸಬೇಕಾಗಿದೆ. ಮಕ್ಕಳಲ್ಲಿರುವ ಆಂತರಿಕ ಪ್ರತಿಭೆಗಳನ್ನು ಹೊರತರುವ ನಿಟ್ಟಿನಲ್ಲಿ ಸರ್ಕಾರ ಕಂಡುಕೊಂಡ ಮಾರ್ಗ ಪ್ರತಿಭಾ ಕಾರಂಜಿ ಸ್ಪರ್ಧೆಯಾಗಿದೆ. ಮಕ್ಕಳು ಕೇವಲ ವ್ಯಾಸಂಗಕ್ಕೆ ಮಾತ್ರ ಸೀಮಿತವಾಗದೆ ಆಟೋಟಗಳಲ್ಲೂ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕೆಂದು ಕರೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಶಿವರಾಮೇಗೌಡ ಮಾತನಾಡಿ, ಮಕ್ಕಳಲ್ಲಿ ಶಿಕ್ಷಣ, ಮನರಂಜನೆ ಹಾಗೂ ಅಭಿವೃದ್ಧಿಗೆ ಉತ್ತೇಜಿಸುವುದರೊಂದಿಗೆ ಮಕ್ಕಳಲ್ಲಿನ ಪ್ರತಿಭೆ ಗುರುತಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಗೀತಾ ಪ್ರೌಢಶಾಲೆಯ ಅಧ್ಯಕ್ಷ ಬಿ.ಎನ್.ಶ್ರೀಕಂಠಯ್ಯ, ಪ್ರಧಾನ ಕಾರ್ಯದರ್ಶಿ ಬಸವರಾಜು, ನಿರ್ದೇಶಕ ಮಾಧು, ಮುಖ್ಯಶಿಕ್ಷಕ ವಸಂತಕುಮಾರ್, ಮುಡಾ ನಿರ್ದೇಶಕ ಎಂ.ಕೃಷ್ಣ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣ ಮಂಗಲ, ಶಿಕ್ಷಣ ಸಂಯೋಜಕರಾದ ಮಧುಸೂದನ್, ಪ್ರೊ.ಭಾಸ್ಕರ್, ಸ್ವಾಮಿ, ನಾಗರಾಜು, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಜಯರಾಮು ಉಪಸ್ಥಿತರಿದ್ದರು.