ಪ್ರತಿಭಾವಂತ ೧೦೦ ಮಕ್ಕಳಿಗೆ ಎರಡು ವರ್ಷ ಉಚಿತ ಶಿಕ್ಷಣ

29blk3
ಉಚಿತ ಶಿಕ್ಷಣ ಮತ್ತು ಪ್ರವೇಶ ಪರೀಕ್ಷೆ ಕುರಿತು ಭಾಲ್ಕಿಯಲ್ಲಿ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾಹಿತಿ ನೀಡಿದರು. ಶ್ರೀ ಗುರುಬಸವ ಪಟ್ಟದ್ದೇವರು, ಮಹಾರಾಷ್ಟ್ರ ಶಾಸಕ ಹರೀಶರಾವ ಪಿಂಪಳೆ, ಶಶಿಧರ ಕೋಸಂಬೆ, ಮೋಹನ ರೆಡ್ಡಿ, ಬಸವರಾಜ ಮೊಳಕೀರೆ ಇದ್ದರು.
Published on

ಭಾಲ್ಕಿ: ಬಡ ಮತ್ತು ಪ್ರತಿಭಾವಂತ ೧೦೦ ಮಕ್ಕಳಿಗೆ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ನಿಂದ ಎರಡು ವರ್ಷ ಉಚಿತ ಪಿಯುಸಿ ಶಿಕ್ಷಣ ಮತ್ತು ಸ್ಪರ್ಧಾತ್ಮಕ ತರಬೇತಿ ನೀಡಲಾಗುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.

ಉಚಿತ ಶಿಕ್ಷಣ ಮತ್ತು ಸ್ಪರ್ಧಾತ್ಮಕ ತರಬೇತಿ ಪಡೆದ ಈ ಭಾಗದ ೮೦೦ ಮಕ್ಕಳು ಉಜ್ವಲ ಭವಿಷ್ಯ ರೂಪಿಸಿಕೊಂಡಿದ್ದಾರೆ. ಗೋಲ್ಡನ್ ಸ್ಕಾಲರ್‌ಶಿಪ್ ಪ್ರವೇಶ ಪರೀಕ್ಷೆಯಲ್ಲಿ ಮೊದಲ ೨೫ ರ‍್ಯಾಂಕ್ ಪಡೆಯುವ ಮಕ್ಕಳು ಎರಡು ವರ್ಷ ಪಿಯುಸಿ ಉಚಿತ ಶಿಕ್ಷಣ ಜತೆಗೆ ವಸತಿ ಮತ್ತು ಸ್ಪರ್ಧಾತ್ಮಕ ತರಬೇತಿ ಸೌಲಭ್ಯ ಪಡೆಯಲಿದ್ದಾರೆ. ನಂತರ ಕ್ರಮವಾಗಿ ೭೫ ವಿದ್ಯಾರ್ಥಿಗಳು ಉಚಿತ ಶಿಕ್ಷಣ ಮತ್ತು ಸ್ಪರ್ಧಾತ್ಮಕ ತರಬೇತಿ ಸೌಲಭ್ಯ ಪಡೆಯಲಿದ್ದಾರೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ವಿದ್ಯಾ ದೇಗುಲ ತೆರೆದು ಈ ಭಾಗದ ವಿದ್ಯಾರ್ಥಿಗಳ ಬಾಳು ಬೆಳಗಿಸುತ್ತಿದ್ದಾರೆ. ಸ್ಕಾಲರ್‌ಶಿಪ್ ಪ್ರವೇಶ ಪರೀಕ್ಷೆ ಏರ್ಪಡಿಸಿ ಬಡ, ಪ್ರತಿಭಾವಂತ ಮಕ್ಕಳಿಗೆ ಉಚಿತ ಶಿಕ್ಷಣ, ತರಬೇತಿ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆಯಬೇಕು ಎಂದು ಹೇಳಿದರು.

ಮಹಾರಾಷ್ಟ್ರ ಶಾಸಕ ಹರೀಶರಾವ ಪಿಂಪಳೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಇದ್ದರು.

ಜ.೫, ೧೨, ೧೯, ೨೫ರಂದು ಪ್ರವೇಶ ಪರೀಕ್ಷೆ: ಗೋಲ್ಡನ್ ಸ್ಕಾಲರ್‌ಶಿಪ್ ಪ್ರವೇಶ ಪರೀಕ್ಷೆ ಜ.೫, ೧೨, ೧೯ ಮತ್ತು ೨೫ರಂದು ಏರ್ಪಡಿಸಲಾಗಿದೆ ಎಂದು ಪ್ರಾಚಾರ್ಯ ಬಸವರಾಜ ಮೊಳಕೀರೆ ತಿಳಿಸಿದರು. ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ನಡೆಯುವ ಪರೀಕ್ಷೆಗೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದ ಇದುವರೆಗೆ ಸುಮಾರು ೭೦೦೦ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net