

ಕೆ.ಆರ್.ಸಾಗರ: ಕೆ.ಆರ್.ಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವೀತಿಯ ಪಿ.ಯು.ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ 40 ವಿದ್ಯಾರ್ಥಿಗಳಿಗೆ ಮೈಸೂರಿನ ಕೆ.ವಿ.ಚಿನ್ನಯ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ 5 ಸಾವಿರ ಮೌಲ್ಯದ ಪ್ರೋತ್ಸಾಹಧನದ ಚೆಕ್ ಗಳನ್ನು ವಿತರಿಸಲಾಯಿತು.
ಕೆ.ವಿ.ಸಿ ಸೂಪರ್ ಸ್ಟೆಷಾಲಿಟಿ ಎಂಡಿ ಕಮಲಾಕ್ಷಿ ಮಾತನಾಡಿ, ನಾನು ಕೂಡ ಕೆ.ಆರ್.ಸಾಗರದ ಸರ್ಕಾರಿ ಶಾಲೆಯಲ್ಲಿ ಓದಿ ಈ ಮಟ್ಟಕ್ಕೆ ಬಂದಿದ್ದೇನೆ. ನಾನು ಓದಿದ ಸರ್ಕಾರಿ ಶಾಲೆ ಮಕ್ಕಳು ಸಹ ಚೆನ್ನಾಗಿ ಓದಬೇಕು ಎಂದು ನಮ್ಮ ಟ್ರಸ್ಟ್ ವತಿಯಿಂದ ಸಹಾಯ ಮಾಡುತ್ತಿದ್ದೇವೆ. ಸರ್ಕಾರಿ ಶಾಲೆ ಎಂದು ಕೀಳರಿಮೆ ಬೇಡ. ಇಲ್ಲಿ ಗುಣಮಟ್ಟದ ಶಿಕ್ಷಣ ಸಿಗಲಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಕೆ.ವಿ.ಸಿ ಟ್ರಸ್ಟ್ ವತಿಯಿಂದ ಪ್ರತಿಭಾಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ. ಸರ್ಕಾರಿ ಶಾಲೆಗಳಿಗೆ ಇಂತಹ ಟ್ರಸ್ಟ್ ಗಳಿಂದ ಹೆಚ್ಚಿನ ಸಹಾಯ ದೊರೆತರೆ ಇಲ್ಲಿ ಕಲಿಯುವ ಬಡ ಮಕ್ಕಳು ಸಹ ಯಾವುದೇ ಖಾಸಗಿ ಶಾಲೆಗಳ ಮಕ್ಕಳಿಗಿಂತ ತಾವು ಕಡಿಮೆ ಇಲ್ಲ ಎಂಬುದನ್ನು ತೋರಿಸಬಲ್ಲರು ಎಂದರು.
ಪ್ರತಿಭಾಂತ ವಿದ್ಯಾರ್ಥಿಗಳಿಗೆ ಟ್ರಸ್ಟ್‌ನ ಲಕ್ಷ್ಮಮ್ಮ ಚಿನಯ್ಯ ಚೆಕ್ ವಿತರಿಸಿದರು. ಪ್ರಾಂಶುಪಾಲ ಚಂದ್ರ, ಉಪಪ್ರಾಂಶುಪಾಲ ಉಮೇಶ್ವರ್, ಕೆ.ವಿ.ಸಿ ಟ್ರಸ್ಟ್ ನ ಇಂದ್ರಾಣಿ, ನಾರಾಯಣ, ಕಮಲಾಕ್ಷಿ, ಸಾಹಿತಿ ಮಜ್ಜಿಗೆಪುರ ಶಿವರಾಂ, ತಾಪಂ ಇಒ ವೀಣಾ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಂ.ಬಿ.ಕುಮಾರ್, ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜೇಶಾಚಾರಿ, ಗ್ರಾಪಂ ಸದಸ್ಯರಾದ ದೇವರಾಜು, ರವಿಕುಮಾರ್, ಶಶಿಕಲಾ, ಸುಧಾ, ಮುಖಂಡರಾದ ಚಾರ್ಸಿ ಶಂಕರ, ನಾಗರಾಜು, ವೆಂಕಟೇಶ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.