ಪ್ರತಿಭಾನ್ವಿತರಿಗೆ ವಿದ್ಯಾರ್ಥಿ ವೇತನ ವಿತರಣೆ

22
Published on

ಮೈಸೂರು: ಸುತ್ತೂರು ಮಠದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜಯಂತಿ ಮಹೋತ್ಸವದಲ್ಲಿ ಜೆಎಸ್‌ಎಸ್ ಪ್ರಸಾದನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ವಿದ್ಯಾರ್ಥಿನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ 32 ಪ್ರತಿಭಾನ್ವಿತರಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.


ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ಉಪಾಧ್ಯಕ್ಷರಾಧ ಡಾ.ಎಂ.ನಂಜುಂಡಪ್ಪ, ಎಲ್. ರೇವಣಸಿದ್ದಯ್ಯ ಇದ್ದರು.


ವಾರ್ಷಿಕ ಸಂಚಿಕೆಗಳಿಗೆ ಬಹುಮಾನ:
ಜೆಎಸ್‌ಎಸ್ ವಿದ್ಯಾಸಂಸ್ಥೆಗಳು 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಹೊರತರುವ ಉತ್ತಮ ವಾರ್ಷಿಕ ಸಂಚಿಕೆಗಳಿಗೆ ಬಹುಮಾನ ವಿತರಿಸಲಾಯಿತು.
ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಸಾಮರ್ಥ್ಯ, ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಪ್ರತಿಭಾ, ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಪಿಯು ಕಾಲೇಜಿನ ಸಿಂಚನ ಪ್ರಥಮ ಬಹುಮಾನ ಪಡೆದವು. ಮೈಸೂರಿನ ಶ್ರೀ ಜಯ ಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ‘ಜೇಜಿನ್’, ಚಾಮರಾಜನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸುವರ್ಣ ಮತ್ತು ಜೆಎಸ್‌ಎಸ್ ಮಹಿಳಾ ಪಿಯು ಕಾಲೇಜಿನ ‘ಹೊಂಬಾಳೆ’ ದ್ವಿತೀಯ ಬಹುಮಾನ ಪಡೆದವು. ಊಟಿಯ ಜೆಎಸ್‌ಎಸ್ ಫಾರ್ಮಸಿ ಕಾಲೇಜಿನ ‘ಫಾರ್ಮಸಾಗ’, ಗುಂಡ್ಲುಪೇಟೆಯ ಜೆಎಸ್‌ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜಿನ ‘ನೆನಪಿನಂಗಳ’ ಮತ್ತು ಕೊಳ್ಳೇಗಾಲದ ಜೆಎಸ್‌ಎಸ್ ಸ್ಕೂಲ್ ಆಫ್ ನರ್ಸಿಂಗ್‌ನ ‘ಆರೈಕೆ’ ಸಂಚಿಕೆಗಳು ಆಯ್ಕೆಯಾಗಿದ್ದವು.


ನಿವೃತ್ತರಾದವರಿಗೆ ಅಭಿನಂದನೆ
ಜೆಎಸ್‌ಎಸ್ ಮಹಾವಿದ್ಯಾಪೀಠದ ವಿವಿಧ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ 2022-23ನೇ ಸಾಲಿನಲ್ಲಿ ನಿವೃತ್ತರಾದವರಿಗೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸನ್ಮಾನಿಸಿ ಆಶೀರ್ವದಿಸಿದರು.
ತಮ್ಮ ನೌಕರಿಯ ದಿನಗಳ ಅನುಭವಗಳನ್ನು ಹಂಚಿಕೊಂಡ ಬಿ.ಎಸ್.ಬಸವಣ್ಣ, ಮರಿಸ್ವಾಮಪ್ಪ ಮತ್ತು ದಯಾನಂದಸ್ವಾಮಿ ಅವರು ಬಡತನದಲ್ಲಿ ಬೆಳೆದು ಬಂದ ನಮಗೆ ರಾಜೇಂದ್ರ ಶ್ರೀಗಳು ಅನ್ನ, ಆಶ್ರಯ, ಅರಿವು ನೀಡಿದರು. ದೇಶಿಕೇಂದ್ರ ಶ್ರೀಗಳು ಜೀವನ ಸಾಗಿಸಲು ಉದ್ಯೋಗವನ್ನು ನೀಡಿದರು. ಸೇವೆ ಸಲ್ಲಿಸಿ ನಿವೃತ್ತರಾದರವನ್ನು ಗೌರವಿಸುವುದು ಒಂದು ಮಾದರಿ ಕಾರ್ಯವಾಗಿದೆ ಎಂದರು .


ಪೂಜ್ಯರ ಮಾತೃವಾತ್ಸಲ್ಯ ನಮ್ಮೆಲ್ಲರ ಭಾವತುಂಬಿ ಬರುವಂತೆ ಮಾಡಿದೆ. ಜೆಎಸ್‌ಎಸ್ ಸಂಸ್ಥೆಯಲ್ಲಿ ಒಂದು ಕುಟುಂಬದ ಸದಸ್ಯರ ರೀತಿಯಲ್ಲಿ ಎಲ್ಲ ನೌಕರರನನ್ನು ಪರಿಗಣಿಸಲಾಗುತ್ತದೆ. ಶ್ರೀಮಠದ ಋಣ ತೀರಿಸುವುದು ಅಸಾಧ್ಯ ಎಂದರು.


ಮಹಾವಿದ್ಯಾಪೀಠದ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ 2022-ಸೆಪ್ಟೆಂಬರ್‌ನಿಂದ 2023-ಆಗಸ್ಟ್ ಅಂತ್ಯದವರೆಗೆ ನಿವೃತ್ತರಾದವರು, ಸೇವೆಯಿಂದ ಬಿಡುಗಡೆಗೊಂಡವರು ಮತ್ತು ಸೇವೆ ಸಲ್ಲಿಸುತ್ತಿರುವಾಗಲೇ ಅಗಲಿದವರ ಕುಟುಂಬದವರಿಗೆ ಸಾಂತ್ವನ - ಹೀಗೆ ಒಟ್ಟು 223 ನೌಕರರು ಹಾಗೂ ಅವರ ಕುಟುಂಬ ವರ್ಗದವರನ್ನು ಶ್ರೀಗಳು ಆಶೀರ್ವದಿಸಿ ಸನ್ಮಾನಿಸಿದರು. ನಿವೃತ್ತರಾದವರ ನೌಕರರ ಪರಿಚಯದ ತೇರನೆಳೆದವರು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಪ್ರೊ.ಆರ್.ಮೂಗೇಶಪ್ಪ, ಆರ್.ಎಸ್.ಪೂರ್ಣಾನಂದ, ಆರ್.ಕೆಂಪರಾಜು, ಡಾ.ಪಿ.ಶಿವಾನಂದ ಭಾರತಿ, ಡಾ.ಎಸ್.ನಟರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net