ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸುವ ಕೆಲಸವಾಗಲಿ : ನಗರಸಭೆ ಅಧ್ಯಕ್ಷ ಆನಂದ್‌ರೆಡ್ಡಿ ಬಾಬು ಆಶಯ

1CBP4dance
Published on

ಚಿಕ್ಕಬಳ್ಳಾಪುರ : ದೇಶದ ಗ್ರಾಮೀಣ ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ನಗರಸಭೆ ಅಧ್ಯಕ್ಷ ಆನಂದ್‌ರೆಡ್ಡಿ ಬಾಬು ಪ್ರತಿಪಾದಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಯಶ್ವಂತ್ ಅಕಾಡೆಮಿ ಆ್ ಕಲ್ಚರಲ್ ಫಿಲಂ ಸೈನ್ಸ್ ಮತ್ತು ರೀಸರ್ಚ್ ಇನ್ಸಿಟಿಟ್ಯೂಟ್, ಯಶ್ವಂತ್ ಸ್ಕೂಲ್ ಆ್ ಡ್ಯಾನ್ಸ್ ಸೋಮವಾರ ಆಯೋಜಿಸಿದ್ದ ಜಿಲ್ಲಾ ಹಾಗೂ ಗ್ರಾಮೀಣಮಟ್ಟದ ನೃತ್ಯ ಸ್ಪರ್ಧೆ ಮತ್ತು ಕರೋನಾ ಸೇನಾನಿಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕ್ರೀಡೆ, ನೃತ್ಯ ಸೇರಿ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಬಹುತೇಕರಲ್ಲಿ ಕೀಳರಿಮೆ ಮೂಡಿದೆ, ಇದರಿಂದಾಗಿಯೇ ತಮ್ಮಲ್ಲಿನ ಪ್ರತಿಭೆ ಪ್ರದರ್ಶಿಸುವಲ್ಲಿ, ಸಾಮರ್ಥ್ಯ ನಿರೂಪಿಸುವಲ್ಲಿ ವಿಫಲರಾಗುತ್ತಿದ್ದಾರೆ. ಮತ್ತೆ ಕೆಲವರು ಎಲೆಮರೆ ಕಾಯಂತೆಯೇ ಮರೆಯಾಗುತ್ತಾರೆ, ಈ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೈಗೊಂಡು ಪ್ರತಿಭಾವಂತರನ್ನು ಪ್ರೋತ್ಸಾಹಿಸಬೇಕು ಎಂಬ ಸಲಹೆ ನೀಡಿದರು.

ಪ್ರತಿಭಾವಂತರು ಸಿಗುವ ಅವಕಾಶಗಳನ್ನು ಸದ್ವಿನಿಯೋಗಪಡಿಸಿಕೊಳ್ಳಬೇಕು. ಅಡ್ಡಿ ಆತಂಕಗಳು ಮತ್ತು ಸವಾಲುಗಳನ್ನು ಮೆಟ್ಟಿ ಸಾಧಕರಾಗಬೇಕು ಎಂದು ನಗರಸಭೆ ಉಪಾಧ್ಯಕ್ಷೆ ವೀಣಾ ರಾಮು ಹುರಿದುಂಬಿಸಿದರು.

ಜಿಲ್ಲೆಯು ಸಾಹಿತ್ಯ, ಕಲೆ ಸೇರಿ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಅನೇಕರು ಈ ಭಾಗದ ಗರಿಮೆಯನ್ನು ಹೆಚ್ಚಿಸಿದ್ದು, ಯುವ ಕಲಾವಿದರು ಮಾದರಿಯಾಗಿ ಸ್ವೀಕರಿಸಬೇಕು ಎಂದು ಹಿರಿಯ ಸಾಹಿತಿ ಸರಸಮ್ಮ ಹೇಳಿಸಿದರು.

ಪ್ರತಿಭೆಗೆ ಬಡವ-ಶ್ರೀಮಂತ ಎಂಬ ತಾರತಮ್ಯವಿಲ್ಲ. ಕಠಿಣ ಪರಿಶ್ರಮವಿದ್ದರೆ ಯಾರೂ ಬೇಕಾದರೂ ಉನ್ನತ ಸ್ಥಾನವನ್ನು ಗಳಿಸಬಹುದು ಎಂಬುದನ್ನು ಮಾನವ ಹಕ್ಕುಗಳ ರಾಜ್ಯ ಸಮಿತಿ ಅಧ್ಯಕ್ಷ ಪಿ.ನಾಗರಾಜ್, ನಿದರ್ಶನದ ಮೂಲಕ ವಿವರಿಸಿದರು.

ರಾಜ್ಯ ಜಾಂಬವ ಯುವಸೇನಾ ಅಧ್ಯಕ್ಷ ಎಂ.ಎಸ್.ಚಕ್ರವರ್ತಿ, ಯಶ್ವಂತ್ ಅಕಾಡೆಮಿ ಅಧ್ಯಕ್ಷ ಎಂ.ಶ್ರೀನಿವಾಸ್, ಕಾರ್ದರ್ಶಿ ರಾಮಲಕ್ಷ್ಮಮ್ಮ, ಚೀಡಚಿಕ್ಕನಹಳ್ಳಿಯ ಟಿ.ಶ್ರೀನಿವಾಸ್, ಖಜಾಂಚಿ ಎಂ.ಎನ್.ನಾರಾಯಣಸ್ವಾಮಿ, ವಕೀಲರಾದ ಶ್ರೀನಿವಾಸ್, ಮುಖಂಡರಾದ ಮುನಿಸ್ವಾಮಿ, ಬೊಮ್ಮನಹಳ್ಳಿ ವೇಣು, ಮುನಿಕೃಷ್ಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net