

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕ ವತಿಯಿಂದ ಜು. 30ರಂದು ಬೆಳಗ್ಗೆ 11 ಗಂಟೆಗೆ ಇಲ್ಲಿನ ಲಿಂಗಾಯತ ಭವನದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮತ್ತು ಸಾಧಕರ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಅರುಣ ಶೀಲವಂತ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಶಾಸಕಿ ಸೀಮಾ ಮಸೂತಿ, ಉದ್ದಿಮೆದಾರ ಶಂಕ್ರಣ್ಣ ಮುನವಳ್ಳಿ, ಅಣ್ಣಪ್ಪ ಬಾಗಿ, ಮಲ್ಲಿಕಾರ್ಜುನ ಸಾವಕಾರ, ಜಿಲ್ಲಾ ಸಂಘದ ಅಧ್ಯಕ್ಷ ಶೇಖರ ಕವಳಿ, ಇತರರು ಭಾಗವಹಿಸುವರು ಎಂದರು.
25 ವಿದ್ಯಾರ್ಥಿಗಳಿಗೆ ಪುರಸ್ಕಾರ ಪ್ರದಾನ ಮಾಡಲಾಗುವುದಲ್ಲದೆ, ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು. ಇದಕ್ಕೂ ಪೂರ್ವ ಬೆಳಗ್ಗೆ 8 ಗಂಟೆಯಿಂದ 9ರವರೆಗೆ ಲಿಂಗಧಾರಣೆ ಮತ್ತು ಸಹಜ ಶಿವಯೋಗ ನಡೆಯಲಿದ್ದು, ಸಾಹಿತಿ ಡಾ. ವೀರಣ್ಣ ರಾಜೂರ ಮತ್ತು ಬಸವ ಕೇಂದ್ರದ ಕಾರ್ಯದರ್ಶಿ ಬಸವಂತಪ್ಪ ತೋಟದ ಅನುಭಾವದ ನುಡಿಗಳನ್ನಾಡುವರು. ಬಸವ ಕೇಂದ್ರದ ಅಧ್ಯಕ್ಷ ಶಿವಣ್ಣ ಶರಣ್ಣವರ ಉಪಸ್ಥಿತರಿರುವರು ಎಂದರು.
ವಿ.ಸಿ.ಸವಡಿ, ಶಿವಕುಮಾರ ಕುಂಬಾರಿ, ಆರ್.ಎಸ್.ಉಪ್ಪಿನ, ರವಿ ಕಪಲಿ, ಮೃತ್ಯುಂಜಯ ಕರಡಿಗುಡ್ಡ, ಸಂತೋಷ ಪಟ್ಟಣಶೆಟ್ಟಿ, ಡಾ. ಶಿವಕುಮಾರ ಗಾಂಜಿ, ಗಿರೀಶ ಬೆಟಗೇರಿ,ಇತರರು ಇದ್ದರು.