

ಕೋಲಾರ: ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆಗೆ ಮುಂದಾದ ನರಸಾಪುರದ ಹೋಂಡಾ ಕಾರ್ಖಾನೆಯ ಸಾವಿರಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ಪ್ರತಿಭಟನೆಗೆ ಅವಕಾಶ ಸಿಗದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಬಿಜೆಪಿ ಕಚೇರಿಗೆ ಅಲೆದು ಕಡೆಗೆ ವಾಪಸಾದರು.
ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾದರೆ ಪೂರ್ವಾನುಮತಿ ಪಡೆಯಬೇಕು. ಆದರೆ ಕೆಲವು ತಿಂಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಬಾರದೆಂದು, ನಗರದ ಹಳೇ ಬಸ್ ನಿಲ್ದಾಣ ಬಳಿ ಪ್ರತಿಭಟನೆ ನಡೆಸಬೇಕು ಎಂದು ಜಿಲ್ಲಾಧಿಕಾರಿಯೇ ಹೊರಡಿಸಿದ್ದ ಆದೇಶವನ್ನು ಸಂಘಟನೆಗಳು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಆದೇಶ ಹೊರಡಿಸಿದ ವಾರದಲ್ಲೇ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗಿಳಿದು ಜಿಲ್ಲಾ ದಂಡಾಧಿಕಾರಿ ಆದೇಶವನ್ನೇ ಧಿಕ್ಕರಿಸಿದ್ದವು. ಅಂತಹ ಸಂಘಟನೆಗಳ ನಡೆ ಪ್ರಶ್ನಿಸಲು ಜಿಲ್ಲಾಧಿಕಾರಿಯೂ ಇಲ್ಲಿ ತನಕ ಹೋಗಲಿಲ್ಲ. ಆದರೆ ಎಂಟ್ಹತ್ತು ವರ್ಷಗಳಿಂದ ಕನಿಷ್ಠ ಸಂಬಳಕ್ಕೆ ದುಡಿಯುತ್ತಿರುವ ಕಾರ್ಮಿಕರು ಸಂಸ್ಥೆ ಆಡಳಿತದವರನ್ನು ಕರೆದು ನಮ್ಮ ಸಮಸ್ಯೆ ಬಗೆಹರಿಸಿ ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ಹೆದ್ದಾರಿಯಲ್ಲಿ ನಾಲ್ಕೆ$ದು ಗಂಟೆ ಬಿಸಿಲಲ್ಲಿ ಕಾದರೂ ಜಿಲ್ಲಾಡಳಿತ ಅವರ ಬಳಿ ಮಾತನಾಡಲು ತೆರಳಲಿಲ್ಲ.
ಜಿಲ್ಲಾಧಿಕಾರಿ ಕಚೇರಿ ಬಳಿ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಕಾರ್ಮಿಕರು, ಬೆಳಗ್ಗೆ 11ರಿಂದ ಮಧ್ಯಾಹ್ನ 3ಗಂಟೆ ತನಕ ಬೆಂಗಳೂರು ಚೆನ್ನೆ$ ಹೆದ್ದಾರಿ ಬದಿಯಲ್ಲೇ ಕುಳಿತಿದ್ದರು. ಕೆಲವು ಕಾರ್ಮಿಕರು ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ತೆರಳಿ ಕಂಪನಿ ಮಾಲೀಕರನ್ನು ಕರೆದು ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿಕೊಂಡರು. ಇನ್ನೂ ಕೆಲವರು ಬಿಜೆಪಿ ಕಚೇರಿಗೆ ತೆರಳಿ ಸಂಸದ ಮುನಿಸ್ವಾಮಿಗೆ ಮನವಿ ಸಲ್ಲಿಸಿದರು. ಯಾರೂ ಪ್ರತಿಭಟನೆಗೆ ಬರಬೇಡಿ, ನಾನೇ ಖುದ್ದು ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು. ಕಾರ್ಮಿಕರಾದ ಪುನೀತ್, ರಿಯಾಜ್ ಪಾಷಾ, ನಟರಾಜ್ ಮತ್ತಿತರರಿದ್ದರು.
ಕಾರ್ಮಿಕರ ಸಮಸ್ಯೆಗಳಿವು: ಎಂಟತ್ತು ವರ್ಷದಿಂದ 15 ರಿಂದ 18 ಸಾವಿರ ರೂ. ಸಂಬಳಕ್ಕೆ ಗುತ್ತಿಗೆ ಕಾರ್ಮಿಕರು ದುಡಿಯುತ್ತಿದ್ದು, ಕಂಪನಿ ನೌಕರರಿಗೆ ಇದೇ ಕೆಲಸಕ್ಕೆ 30 ಸಾವಿರ ರೂ. ಮೇಲ್ಪಟ್ಟು ಸಂಬಳ ನೀಡುತ್ತಿದ್ದಾರೆ. ಸಮಾನ ಕೆಲಸಕ್ಕೆ ಸಮಾನ ವೇತನದಂತೆ ನಮಗೂ ಅಷ್ಟೇ ಸಂಬಳ ನೀಡಬೇಕು. ಪ್ರತಿವರ್ಷ ಸಂಬಳ ಹೆಚ್ಚಿಸುವ ಪರಿಪಾಠವಿಲ್ಲ. 11 ತಿಂಗಳಿಗೊಮ್ಮೆ ರೀ ಜಾಯಿನಿಂಗ್ ಮಾಡಿಕೊಳ್ಳುತ್ತಾರೆ. ಆಗ 1 ರಿಂದ 3 ತಿಂಗಳು ಸಂಬಳ ಕೊಡುವುದಿಲ್ಲ. ಇತ್ತೀಚೆಗೆ 430 ಮಂದಿಗೆ ಈ ರೀತಿ ಆದೇಶಿಸಿದ್ದು, ಇನ್ನೂ ಕೆಲಸಕ್ಕೆ ತೆಗೆದುಕೊಂಡಿಲ್ಲ. ಉದ್ಯೋಗ ಭದ್ರತೆ ಕಲ್ಪಿಸಿಕೊಡಬೇಕು ಎಂಬುದು ಗುತ್ತಿಗೆ ಕಾರ್ಮಿಕರ ಬೇಡಿಕೆಗಳು. ಮ್ಯಾನೇಜ್ಮೆಂಟ್ನವರು ನೇರ ಮಾತನಾಡುತ್ತಿಲ್ಲ, ಅವರು ಅರ್ಧಗಂಟೆ ಕುಳಿತು ಮಾತನಾಡಿದರೆ ಸಮಸ್ಯೆ ಬಗೆಹರಿಯುತ್ತದೆ ಎಂಬುದು ಬಹುತೇಕ ಕಾರ್ಮಿಕರ ಅಭಿಪ್ರಾಯ. ಕನಿಷ್ಠ ಮಧ್ಯಸ್ಥಿಕೆ ವಹಿಸಲು ನಮ್ಮ ಅಧಿಕಾರಿ, ಜನನಾಯಕರಿಗೆ ವ್ಯವದಾನವಿಲ್ಲ ಎಂಬುದು ವಾಸ್ತವ ಸಂಗತಿ.