ಪ್ರತಿಭಟನೆ ನಡುವೆ ನಗರಸಭೆ ಉದ್ಘಾಟನೆ, ಸಂಜೆಯಾದರೂ ಕಾರ್ಯಕ್ರಮಕ್ಕೆ ಬಾರದ ಸಚಿವ ಸುಧಾಕರ್, ಎಂಟಿಬಿ ನಾಗರಾಜ್ ಕೂಡ ಗೈರು

16dbp1
Published on

ದೊಡ್ಡಬಳ್ಳಾಪುರ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಮತ್ತು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಗೈರಿನ ನಡುವೆ ಪೌರಕಾರ್ಮಿಕರು ನಗರಸಭೆ ನೂತನ ಕಟ್ಟಡವನ್ನು ಬುಧವಾರ ಉದ್ಘಾಟಿಸಿದರು.

ಈ ಹಿಂದೆ ಕಟ್ಟಡದ ಉದ್ಘಾಟನೆಗೆ ನಾಲ್ಕು ಬಾರಿ ದಿನಾಂಕ ನಿಗದಿಪಡಿಸಲಾಗಿತ್ತು. ಅದರಂತೆ ಕಟ್ಟಡವನ್ನು ಸಿಂಗರಿಸಲಾಗಿತ್ತು. ಆದರೆ, ಕಾರಣಾಂತರದಿಂದ ನಾಲ್ಕು ಬಾರಿಯೂ ಕಾರ್ಯಕ್ರಮ ಮುಂದಕ್ಕೆ ಹೋಗಿತ್ತು. ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪೌರಾಡಳಿತ ಸಚಿವರಿಂದ ಉದ್ಘಾಟಿಸಲು ನಿರ್ಧರಿಸಿ ಮುಹೂರ್ತ ನಿಗದಿಪಡಿಸಲಾಗಿತ್ತು. ಆದರೆ ಸಚಿವರಿಬ್ಬರೂ ಇತ್ತ ತಲೆಹಾಕಲಿಲ್ಲ. ನಗರಸಭೆ ಅಧ್ಯಕ್ಷೆ ಸುಧಾರಾಣಿ, ಉಪಾಧ್ಯಕ್ಷೆ ಫರ್ಹಾನಾ ತಾಜ್ ಸಮಾರಂಭದಿಂದ ದೂರವುಳಿದಿದ್ದರು.

ಪೌರಕಾರ್ಮಿಕರಿಂದ ಉದ್ಘಾಟನೆ: ಶಾಸಕ ಟಿ.ವೆಂಕಟರಮಣಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ರವಿ ಪೌರಕಾರ್ಮಿಕರ ಮೂಲಕ ಕಟ್ಟಡ ಉದ್ಘಾಟಿಸುವ ನಿರ್ಧಾರ ಮಾಡಿದರು. ಅದರಂತೆ ದೀಪ ಬೆಳಗಿಸಿದ ಪೌರಕಾರ್ಮಿಕರು ಕಟ್ಟಡ ಉದ್ಘಾಟಿಸಿದರು. ಮಗುವಿನ ಕೈಯಲ್ಲಿ ನಗರಸಭೆ ನಾಮಲಕ ಅನಾವರಣಗೊಳಿಸಲಾಯಿತು.

ಸಚಿವರ ಧೋರಣೆಗೆ ಬೇಸರ: ಸಚಿವರಿಬ್ಬರೊಂದಿಗೂ ಚರ್ಚಿಸಿ, ನಗರಸಭೆ ಕಟ್ಟಡದ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಲಾಗಿತ್ತು. ಆಹ್ವಾನ ಪತ್ರಿಕೆ ಮುದ್ರಿಸಿ ಹಂಚಿದ್ದಲ್ಲದೆ, ಸಚಿವದ್ವಯರನ್ನೂ ಆಹ್ವಾನಿಸಲಾಗಿತ್ತು. ಸಮಾರಂಭಕ್ಕಾಗಿ ವೇದಿಕೆ ಸಿದ್ಧಪಡಿಸಿ, ಪೂಜೆ, ಬರುವ ಅತಿಥಿಗಳ ಊಟೋಪಚಾರಕ್ಕೂ ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಇಷ್ಟೆಲ್ಲ ಸಿದ್ಧತೆ ಮಾಡಿಕೊಂಡರೂ ಸಚಿವದ್ವಯರ ಗೈರಿಗೆ ಶಾಸಕರ ಹಾಗೂ ಎಂಎಲ್‌ಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕಿನ ಬಗ್ಗೆ ಬಿಜೆಪಿ ಪ್ರಮುಖರು ಅನುಸರಿಸುತ್ತಿರುವ ಉದಾಸೀನತೆಗೆ ಇದು ಒಳ್ಳೆಯ ಉದಾಹರಣೆ ಎಂದು ಬೇಸರ ವ್ಯಕ್ತಪಡಿಸಿದರು.

ಸಚಿವ ಎಂಟಿಬಿ ಆಕ್ರೋಶ: ನಗರಸಭೆ ಕಟ್ಟಡವನ್ನು ಪೌರಕಾರ್ಮಿಕರಿಂದ ಉದ್ಘಾಟನೆ ಮಾಡಿಸಿದ ಸುದ್ದಿ ತಿಳಿದ ಸಚಿವ ಎಂಟಿಬಿ ನಾಗರಾಜ್ ತೀವ್ರ ಸಿಟ್ಟಿಗೆದ್ದರು. ಪೌರಕಾರ್ಮಿಕರ ಕೈಯಲ್ಲಿ ಏಕೆ ಉದ್ಘಾಟನೆ ಮಾಡಿಸಿದಿರಿ? ಇನ್ನೊಂದು ದಿನ ಕಾರ್ಯಕ್ರಮ ಮಾಡಿದ್ದರೆ ಆಗುತ್ತಿತ್ತು ಎಂದು ತಮಗೆ ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾಗಿ ಮೇಲ್ಮನೆ ಸದಸ್ಯ ಎಸ್. ರವಿ ಆರೋಪಿಸಿದರು.

ಅಧಿಕಾರಿಗಳೂ ಗೈರು: ಸಂಜೆ ವೇಳೆಗೆ ಸಚಿವದ್ವಯರು ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ ಎಂಬ ಭರವಸೆಯಲ್ಲಿ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅವರು ನಗರದ ಪ್ರವಾಸಿ ಮಂದಿರದಲ್ಲಿ ಎರಡು ಗಂಟೆ ಕಾದು ಸುಸ್ತಾದರು. ಸಚಿವರು ಬಾರದಿದ್ದರಿಂದ, ಪೌರಾಯುಕ್ತ ಶಿವಶಂಕರ್ ಸೇರಿ ಅಧಿಕಾರಿಗಳು ಯಾರೂ ಕೂಡ ಕಾರ್ಯಕ್ರಮಕ್ಕೆ ಬರಲಿಲ್ಲ ಎನ್ನಲಾಗಿದೆ.

ಕತ್ತರಿಗಾರಿ 15 ನಿಮಿಷ ಕಾದರು: ದೀಪ ಬೆಳಗಿಸಿ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಪೌರಕಾರ್ಮಿಕರು ನಗರಸಭೆಯ ನೂತನ ಕಟ್ಟಡದ ಮುಖ್ಯದ್ವಾರಕ್ಕೆ ಕಟ್ಟಿದ್ದ ಟೇಪ್ ಕತ್ತರಿಸಲು ಮುಂದಾದರು. ಆದರೆ, ಅಲ್ಲಿ ಕತ್ತರಿ ಇರಲಿಲ್ಲ. ಕತ್ತರಿ ತರಲು ಹೋದವರು 15 ನಿಮಿಷಗಳ ಬಳಿಕ ಬಂದರು. ಅಲ್ಲಿಯವರೆಗೂ ಪೌರಕಾರ್ಮಿಕರು ಕತ್ತರಿಗಾಗಿ ಕಾಯುತ್ತಲೇ ನಿಂತಿದ್ದರು.

ಸಚಿವದ್ವಯರು ಕೊಟ್ಟಿದ್ದ ದಿನಾಂಕ ಮತ್ತು ಸಮಯದಂದು ಕಾರ್ಯಕ್ರಮ ವ್ಯವಸ್ಥೆ ಮಾಡಿದ್ದೆವು. ಅವರಿಗಾಗಿ ಕಾದುಕಾದು ಸುಸ್ತಾದೆವು. ದೊಡ್ಡಬಳ್ಳಾಪುರ ಜನತೆಗೆ ಅವರು ಮಾಡಿರುವ ಅಪಮಾನವಿದು. ತಾಲೂಕಿನ ಜನತೆ ಬಗ್ಗೆ ಬಿಜೆಪಿ ನಾಯಕರಿಗೆ ಕಾಳಜಿ ಇಲ್ಲ. ಅವರ ಸರ್ವಾಧಿಕಾರ ಧೋರಣೆ ಎಷ್ಟು ಸರಿ? ಎಸ್. ರವಿ, ವಿಧಾನಪರಿಷತ್ ಸದಸ್ಯ

ಶಿಷ್ಟಾಚಾರ ಉಲ್ಲಂಸಿ ಉದ್ಘಾಟನೆ: 12 ರಿಂದ14 ವರ್ಷದೊಳಗಿನ ಮಕ್ಕಳಿಗೆ ಕಾರ್ಬಿವ್ಯಾಕ್ಸ್ ಲಸಿಕೆ ನೀಡುವ ಸರ್ಕಾರದ ಮಹತ್ವದ ಕಾರ್ಯಕ್ರಮಕ್ಕೆ ವಿಧಾನಸೌಧ ಆವರಣದಲ್ಲಿ ಸಿಎಂ ಚಾಲನೆ ನೀಡಿದರು, ಅಲ್ಲದೆ ಬಜೆಟ್ ಮೇಲಿನ ರಿಪ್ಲೆಗೆ ಇಟ್ಟುಕೊಂಡಿದ್ದರು. ಇವೆರಡು ಅತೀ ಮುಖ್ಯವಾದ ಕಾರ್ಯಕ್ರಮವಾದ್ದರಿಂದ ನಾವು ಕಡ್ಡಾಯವಾಗಿ ಅದರಲ್ಲಿ ಪಾಲ್ಗೊಳ್ಳಬೇಕಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸ್ಥಳೀಯ ಶಾಸಕರ ಗಮನಕ್ಕೂ ತರಲಾಗಿತ್ತು. ಇನ್ನೆರಡು ದಿನಗಳಲ್ಲಿ ಉದ್ಘಾಟನೆ ಕಾರ್ಯಕ್ರಮ ಇಟ್ಟುಕೊಳ್ಳುವಂತೆ ತಿಳಿಸಲಾಗಿತ್ತು. ಆದರೂ ಶಿಷ್ಟಾಚಾರ ಉಲ್ಲಂಸಿ ಶಾಸಕ ವೆಂಕಟರಮಣಯ್ಯ ಹಾಗೂ ಎಂಎಲ್‌ಸಿ ರವಿ ಅವರು ಟೇಪ್ ಕತ್ತರಿಸಿ ನಗರಸಭೆ ಕಟ್ಟಡ ಉದ್ಘಾಟನೆ ಪ್ರಹಸನ ನಡೆಸಿದ್ದಾರೆ ಎಂದು ಸಚಿವ ಎಂಟಿಬಿ ನಾಗರಾಜ್ ಪ್ರತಿಕ್ರಿಯಿಸಿದ್ದಾರೆ. ಬಲವಾದ ಕಾರಣವಿದ್ದರಿಂದಲೇ ನಾನು ಹಾಗೂ ಸಚಿವ ಡಾ.ಕೆ.ಸುಧಾಕರ್ ಕಾರ್ಯಕ್ರಮ ಮುಂದೂಡುವಂತೆ ತಿಳಿಸಿದ್ದೆವು. ಇದರಲ್ಲಿ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net