

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಮೂರು ದಿನಗಳಿಂದ ಅಹೋರಾತ್ರಿ ಧರಣಿ ನಡೆಸಿದ್ದ ಎಐಸಿಸಿ ಸದಸ್ಯ ದೀಪಕ್ ಚಿಂಚೋರೆ ಸೇರಿ ಅನೇಕ ಕಾಂಗ್ರೆಸ್ ಕಾರ್ಯಕರ್ತರನ್ನು ಗುರುವಾರ ಪೊಲೀಸರು ವಶಕ್ಕೆ ಪಡೆದರು.
ಯುವ ಜನೋತ್ಸವ ಸಂದರ್ಭದಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯದ ವಸತಿ ನಿಲಯಗಳಿಂದ ವಿದ್ಯಾರ್ಥಿಗಳನ್ನು ಹೊರ ಹಾಕಿರುವ ಕ್ರಮ ಖಂಡಿಸಿ, ಜಲಮಂಡಳಿ ಗುತ್ತಿಗೆ ಕಾರ್ಮಿಕರಿಗೆ ವೇತನ ಬಿಡುಗಡೆ ಹಾಗೂ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವಂತೆ ಆಗ್ರಹಿಸಿ ದೀಪಕ ಚಿಂಚೋರೆ ನೇತೃತ್ವದಲ್ಲಿ ಮೂರು ದಿನಗಳಿಂದ ಅಹೋರಾತ್ರಿ ಧರಣಿ ಆರಂಭಿಸಲಾಗಿತ್ತು. ಆದರೆ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದ್ದರೂ ಸ್ಪಂದಿಸದ ಕಾರಣ ಪೊಲೀಸರು ಬಂಧಿಸಿ ಸಂಜೆ ಬಿಡುಗಡೆ ಮಾಡಿದ್ದಾರೆ.
ಯುವ ಜನೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಆಗಮಿಸುತ್ತಿರುವ ಕಾರಣಕ್ಕೆ ಪ್ರತಿಭಟನೆ ಹಿಂಪಡೆಯಲು ಪೊಲೀಸರು ಮನವಿ ಮಾಡಿದ್ದರು. ಆದರೆ ಪ್ರತಿಭಟನಾಕಾರರು ಮಾತ್ರ ಇದಕ್ಕೆ ಸ್ಪಂದಿಸದೆ, ಮಧ್ಯಾಹ್ನ ಮೆರವಣಿಗೆ ನಡೆಸಲು ಮುಂದಾಗಿದ್ದರು. ಹುಬ್ಬಳ್ಳಿಗೆ ಸಹ ತೆರಳುವ ಸಾಧ್ಯತೆ ಇರುವ ಕಾರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿ ಸಂಜೆವರೆಗೆ ಪೊಲೀಸ್ ಹೆಡ್ ಕ್ವಾರ್ಟ್‌ರ್ಸನಲ್ಲಿ ಇಡಲಾಗಿತ್ತು. ಸಂಜೆ 6 ಗಂಟೆ ಬಳಿಕ ಎಲ್ಲರನ್ನೂ ಬಿಡುಗಡೆ ಮಾಡಿದರು.
ಶರಣಪ್ಪ ಕೊಟಗಿ, ಸ್ವಾತಿ ಮಾಳಗಿ, ಸತೀಶ ತುರಮರಿ, ಗೀತಾ ತಾಂವಶಿ, ಶಂಕರ ಹೊಸಮನಿ, ರೋಹಣ ಹಿಪ್ಪರಗಿ, ಬಸವರಾಜ ಕಿತ್ತೂರ, ಕಾರ್ಯಕರ್ತರು, ಇತರರು ಇದ್ದರು.