ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಯತ್ನಾಳ್?

pratap simha
Published on

ಮೈಸೂರು; ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಕೇಳಿಬರುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಸುಳಿವು ನೀಡಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷ ನಾಯಕನನ್ನು ಶೀಘ್ರವೇ ಆಯ್ಕೆ ಮಾಡಲಾಗುತ್ತದೆ. ಎದೆಗಾರಿಕೆ ಇರೋ ನಾಯಕ ಬೇಕು ಎಂಬ ಆಗ್ರಹ ಎಲ್ಲಡೆಯಿಂದ ಕೇಳಿಬರುತ್ತಿದೆ. ರಾಷ್ಟ್ರೀಯತೆ, ಹಿಂದುತ್ವವನ್ನು ಯತ್ನಾಳ್ ಗಟ್ಟಿಯಾಗಿ ಪ್ರತಿಪಾದಿಸುತ್ತಾರೆ. ಯತ್ನಾಳ್ ಅವರೆಂದರೆ ಒಂದು ಹವಾ ಇದೆ ಎಂದು ಹೇಳಿದರು.

ಧೋಖಾ ಸರ್ಕಾರ:
ಗೃಹಜ್ಯೋತಿ ಯೋಜನೆಯಡಿ ನಿಮ್ಮದು ಧೋಖಾ ಸರ್ಕಾರ ಎಂಬುದು ಸಾಬೀತಾಗಿದೆ. ಉಚಿತ ಯೋಜನೆಗಳು ಒಂಥರ ಗಂಡನ ದರೋಡೆ ಮಾಡಿ, ಪತ್ನಿಗೆ ಕೊಟ್ಟಂತೆ. ಗಂಡನ ಜೇಬಿಗೆ ಕತ್ತರಿ ಹಾಕಿ ಪತ್ನಿಗೆ ಕೊಡುವುದರಲ್ಲಿ ಏನು ಅರ್ಥ ಇದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.


ಕೇಂದ್ರದಿಂದ ನರೇಂದ್ರ ಮೋದಿ ಅವರು ನೀಡುವ ಅಕ್ಕಿ ಪಡೆದು ಜನರಿಗೆ ನೀಡಲು ನೀವು ಚುನಾವಣೆ ಗೆದ್ದು ಬರಬೇಕೇ? ಜುಲೈ ತಿಂಗಳಿಂದ ತಲಾ 10 ಕೆಜಿ ಅಕ್ಕಿ ಕೊಡಲಾಗದಿದ್ದರೆ ಮನೆ ಯಜಮಾನನ ಖಾತೆಗೆ ಅಕ್ಕಿ ಹಣ ಜಮೆ ಮಾಡಬೇಕು ಎಂದು ಆಗ್ರಹಿಸಿದರು.


ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಎಲ್ಲ ಕಡೆ ಚುನಾವಣೆ ಇದೆ. ಅಲ್ಲೂ ನೀವು ಉಚಿತ ಅಕ್ಕಿ ಘೋಷಣೆ ಮಾಡಿದರೆ ಅಕ್ಕಿ ಕೊಡಲಾಗುತ್ತದೆಯೇ? ಈ ವರ್ಷ ಮುಂಗಾರು ಕೈಕೊಟ್ಟಿದೆ. ಬರ ಪ್ರದೇಶಗಳಿಗೆ ಅಕ್ಕಿ ಕೊಡಬೇಕಾದರೆ ಕೇಂದ್ರ ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಿ ನಾಡಿನ ಜನರಿಗೆ ವಿತರಿಸಬೇಕು ಎಂದು ಆಗ್ರಹಿಸಿದರು

ಜನರಿಗೆ ಕರೆಂಟ್ ಶಾಕ್:
ವಿದ್ಯುತ್ ದರ ಯದ್ಗಾತದ್ವಾ ಏರಿಕೆಯಾಗಿದೆ. ಜನರಿಗೆ ಕರೆಂಟ್ ಶಾಕ್ ಹೊಡೆದಿದೆ. ಕೈಗಾರಿಕೆಗಳಿಗೂ ಬರೆ ಹಾಕುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿ, ಕೈಗಾರಿಕೋದ್ಯಮಿಗಳು ಕರೆ ಕೊಟ್ಟಿರುವ ‘ಕರ್ನಾಟಕ ಬಂದ್’ಗೆ ರಾಜ್ಯದ ಜನರು ಬೆಂಬಲ ನೀಡಬೇಕು ಎಂದು ಪ್ರತಾಪ್ ಸಿಂಹ ವಿನಂತಿಸಿದರು.
‘ಪ್ರತಾಪ್ ಸಿಂಹ ಚಿಲ್ಲರೆ ರಾಜಕಾರಣ ಬಿಡಲಿ’ ಎಂಬ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಪಾಟೀಲ್‌ಗೆ ಈಗ ಸಿಕ್ಕಿರುವ ಖಾತೆಯಲ್ಲಿ ಬರಿ ಚಿಲ್ಲರೆ ಸಿಗುತ್ತದೆ. ಕೂತ ಕಡೆ ಕಂತೆ ಕಂತೆ ಕಾಸು ಬರುವ ಖಾತೆ ಸಿಗಲಿಲ್ಲವೆಂದು ವಿಲವಿಲ ಒದ್ದಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಸಿದ್ದರಾಮಯ್ಯ ಅವರನ್ನು ಓಲೈಕೆ ಮಾಡುವುದೇ ತಮ್ಮ ಖಾತೆ ಜವಾಬ್ದಾರಿ ಎಂದವರು ತಿಳಿಸಿದ್ದಾರೆ. ಪಾಟೀಲ್ ನಿಜವಾಗಿಯೂ ಲಿಂಗಾಯತರಾ? ಬಿ.ಎಸ್.ಯಡಿಯೂರಪ್ಪ ವಿರುದ್ಧ ಷಡ್ಯಂತ್ರ ಮಾಡಲು ಕಾಂಗ್ರೆಸ್‌ನಿಂದ ಸುಪಾರಿ ತೆಗೆದುಕೊಂಡವರು ಇವರೇ ತಾನೇ? ಸಿದ್ದರಾಮಯ್ಯಲಿಂಗಾಯತ ಧರ್ಮ ಒಡೆಯಲು ಹೋದಾಗ ಅದರ ಸುಪಾರಿ ಪಡೆದವರು ಇವರೇ ತಾನೇ? ಈಗ ಸಿದ್ದರಾಮಯ್ಯ ಅವರೇ ಪೂರ್ಣವಧಿ ಸಿಎಂ ಎನ್ನುವ ಮೂಲಕ ಒಕ್ಕಲಿಗರನ್ನು ಮುಗಿಸಲು ಹೊರಟಿದ್ದಾರೆ ಎಂದು ಪ್ರತಾಪ್ ಸಿಂಹ ಲೇವಡಿ ಮಾಡಿದರು.

ಚೇಲಾ ಪಡೆಯಿಂದ ಹೇಳಿಕೆ:
ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಎಂ.ಬಿ. ಪಾಟೀಲ್ ಇಬ್ಬರೂ ‘5 ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ’ ಎಂದು ಹೇಳಿದ್ದಾರೆ. ಅಧಿಕಾರ ಬಿಟ್ಟುಕೊಡುವ ಇರಾದೆ ಸಿದ್ದರಾಮಯ್ಯ ಅವರಿಗೆ ಇಲ್ಲ. ಆದ್ದರಿಂದ ತಮ್ಮ ಚೇಲಾ ಪಡೆ ಮೂಲಕ ತಾವೇ ಪೂರ್ಣಾವಧಿಗೆ ಸಿಎಂ ಅಂತ ಹೇಳಿಸುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಕುಟುಕಿದರು.
ನಾನೇ ಪೂರ್ಣಾವಧಿ ಸಿಎಂ ಅಂತ ನೇರವಾಗಿ ಹೇಳುವ ಧೈರ್ಯ ಸಿದ್ದರಾಮಯ್ಯಗೆ ಇಲ್ಲ. ಅವರಿಗೆ ಪುಕ್ಕಲುತನ. ಚುನಾವಣೆ ಗೆಲ್ಲುವಲ್ಲಿ ಡಿ.ಕೆ.ಶಿವಕುಮಾರ್ ಪಾತ್ರ ದೊಡ್ಡದಿದೆ. ಕಾಂಗ್ರೆಸ್ ಧಾರಾಳ ಮನಸ್ಸಿನಿಂದ ಸಿದ್ದರಾಮಯ್ಯ ಅವರನ್ನು 2ನೇ ಬಾರಿ ಸಿಎಂ ಮಾಡಿದೆ. ಆದರೆ, ಸಿದ್ದರಾಮಯ್ಯಗೆ ಉದಾರತನವಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬ್ರಾಹ್ಮಣರನ್ನು ಏಕೆ ಬೈಯುತ್ತೀರಿ?
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬಗ್ಗೆ ಪದೇ ಪದೆ ಏಕೆ ಮಾತಾಡುತ್ತೀರಿ? ಬ್ರಾಹ್ಮಣರನ್ನು ದಿನವೂ ಏಕೆ ಬೈಯುತ್ತೀರಿ? ಬ್ರಾಹ್ಮಣರ ಮೇಲೆ ನಿಮಗೇಕೆ ದ್ವೇಷ? ಬಸವೇಶ್ವರರು ಮೂಲದಲ್ಲಿ ಬ್ರಾಹ್ಮಣರಲ್ಲವೇ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net