

ಮರಿದೇವ ಹೂಗಾರ ಹುಬ್ಬಳ್ಳಿ
ಕರೊನಾ ಸೋಂಕು ಎಲ್ಲಿಂದ ಬಂತೋ ಗೊತ್ತಿಲ್ಲ. ತೀವ್ರ ಜ್ವರ ಬಂದಿತ್ತು. ಉಸಿರಾಡಲು ತೊಂದರೆಯಾಗುತ್ತಿತ್ತು. ಅಶಕ್ತತೆಯಾಗಿತ್ತು. ಪರೀಕ್ಷೆ ಮಾಡಿಸಿಕೊಂಡಾಗ ಪಾಸಿಟಿವ್ ಬಂದಿದ್ದು ಅನಿರೀಕ್ಷಿತ. ಆಸ್ಪತ್ರೆಗೆ ದಾಖಲಾಗಿದ್ದು ಆಯಿತು. ಕಿಮ್್ಸ ವೈದ್ಯರು ಹಾಗೂ ಸಿಬ್ಬಂದಿ ನನ್ನ ರೋಗ ಹೊಡೆದೋಡಿಸಲು ಶ್ರಮಿಸುತ್ತಿದ್ದರು. ಅದರ ಜೊತೆಗೆ ನಾನು ನಿತ್ಯ ಒಂದು ತಾಸು ಕಪಾಲಭಾತಿ, ಪ್ರಾಣಾಯಾಮ ಮಾಡುತ್ತಿದ್ದೆ...
ಸೋಂಕಿನಿಂದ ಗುಣಮುಖವಾಗಿ ಮನೆಗೆ ಮರಳಿರುವ ಇಲ್ಲಿನ ಕೇಶ್ವಾಪುರ ಶಾಂತಿನಗರದ ವ್ಯಕ್ತಿ(ಪಿ-589) ತಾನು ಕಿಮ್ಸ್ನಲ್ಲಿ ಕಳೆದ 24 ದಿನಗಳ ಕುರಿತು ‘ವಿಜಯವಾಣಿ’ ಜೊತೆ ಮಾಹಿತಿ ಹಂಚಿಕೊಂಡರು. ಬೆಳಗ್ಗೆ 8 ಗಂಟೆಯಿಂದ 9ರವರೆಗೆ ಯೋಗಾಭ್ಯಾಸ, ವ್ಯಾಯಾಮ ಮಾಡುತ್ತಿದ್ದೆ. ಆರೋಗ್ಯದ ಬಗೆಗೆ ಕಾಳಜಿ ಶುರುವಾಗಿದ್ದೇ ಕರೊನಾ ಸೋಂಕು ನನಗೆ ಬಂದ ಮೇಲೆ. ಅಲ್ಲಿಯವರೆಗೆ ಇದ್ದಿಲ್ಲವೆಂದಲ್ಲ, ಆಸ್ಪತ್ರೆ ವಾಸ ಜೀವ-ಜೀವನದ ಪಾಠ ಕಲಿಸಿತು. ಇನ್ನುಮುಂದೆಯೂ ಯೋಗ, ವ್ಯಾಯಾಮವನ್ನು ನಿತ್ಯದ ಅಭ್ಯಾಸವಾಗಿಸಿಕೊಳ್ಳುತ್ತೇನೆ ಎಂದರು.
ನಾನು ಆಹಾರ ಧಾನ್ಯದ ಕಿಟ್ಗಳನ್ನು ಹಂಚಿದ್ದೆ. ಆದರೆ, ಅದು ಮಾರ್ಚ್ ತಿಂಗಳಲ್ಲಿ. ಆ ಮೇಲೆ ಮನೆಯಲ್ಲಿಯೇ ಉಳಿದಿದ್ದೆ. ಕಮರಿಪೇಟೆಗೆ ಮಾಂಸ ತರಲು ಹೋಗಿರಲಿಲ್ಲ. ನನ್ನ ಅಳಿಯನೇ ತಂದುಕೊಟ್ಟಿದ್ದ. ಸೋಂಕು ಹೇಗೆ ಬಂತು ಎಂಬುದು ಇದುವರೆಗೂ ತಿಳಿಯುತ್ತಿಲ್ಲ. ಸೋಂಕಿನಿಂದ ಗುಣಮುಖವಾಗಿ ಮನೆಗೆ ಬಂದಾಗ ನಿನಗೆ ಕರೊನಾ ಸೋಂಕು ಹೇಗೆ ಬಂತು ಎಂದು ಮನೆಯವರು, ಬಂಧುಗಳೆಲ್ಲ ಕೇಳುತ್ತಿದ್ದಾರೆ. ಈಗಲೂ ಗೊತ್ತಾಗುತ್ತಿಲ್ಲ. ಹೇಗೆ ಬಂತು ಎಂದು ಚಿಂತಿಸುವುದರ ಬದಲು ಬಂದದ್ದು ಬಂದು ಹೋಗಿದೆ. ಇನ್ಯಾರಿಗೂ ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು. ನಾನು ಚೇತರಿಸಿಕೊಳ್ಳುತ್ತಿದ್ದೆ. ಅದೇ ಹೊತ್ತಿಗೆ, ನನ್ನ ಮಗನಿಗೆ (ಪಿ-1124) ಕರೊನಾ ಸೋಂಕು ಬಂದಿರುವುದನ್ನು ಕೇಳಿ ಕಣ್ಣೀರು ಬಂತು. ಎಲ್ಲರಿಗೂ ಸೋಂಕು ಹಚ್ಚಿಬಿಟ್ಟೆನಾ ಎಂದು ಭಯವಾಯಿತು. ನನ್ನ ವಾರ್ಡ್ ಬಳಿಯೇ ಇದ್ದ ಮಗನನ್ನು ಮಾತನಾಡಿಸಿದೆ. ಆರಾಮ ಅದೀನಿ, ನೀನು ಏನೂ ಭಯಪಡಬೇಡ ಅಪ್ಪ... ಆತ ನಿರುಮ್ಮಳನಾಗಿಯೇ ಹೇಳಿದ ಮೇಲೆ ನನಗೆ ಧೈರ್ಯ ಬಂದಿದೆ. ಮಗನೂ ಅಷ್ಟೇ, ಎಲ್ಲಿಗೂ ಹೋದವನಲ್ಲ. ನನ್ನಿಂದಲೇ ಸೋಂಕು ಹರಡಿ ಆತನೂ ಆಸ್ಪತ್ರೆ ಸೇರುವಂತಾಯಿತಲ್ಲ... ಎಂದು ಬೇಸರ ವ್ಯಕ್ತಪಡಿಸಿದರು. ಕಿಮ್್ಸ ವೈದ್ಯರ ಕಾಳಜಿ ಅಪಾರ. ಆಸ್ಪತ್ರೆಯಲ್ಲಿದ್ದಾಗ ಮಾತ್ರವಲ್ಲ, ಈಗಲೂ ಅವರು ದೇವರಂತೆ ಕಾಣುತ್ತಾರೆ ಎಂದು ಸೋಂಕು ಗೆದ್ದುಬಂದ ವ್ಯಕ್ತಿ ಕೃತಜ್ಞತೆಯಿಂದ ಹೇಳಿದರು.
ಚಪ್ಪಾಳೆಯ ಅಭಿನಂದನೆ: ಕರೊನಾದಿಂದ ಗುಣಮುಖರಾಗಿ ಬಿಡುಗಡೆಗೊಂಡವರನ್ನು ಕಿಮ್್ಸ ವೈದ್ಯರು ಮತ್ತು ಸಿಬ್ಬಂದಿ ಸಾಲಾಗಿ ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿ ಕಳುಹಿಸಿಕೊಡುವ ಪದ್ಧತಿ ಹಾಕಿಕೊಂಡಿದ್ದಾರೆ. ಕೇಶ್ವಾಪುರ ಶಾಂತಿನಗರದ ಪುರುಷ ಹಾಗೂ ಬಾದಾಮಿ ಢಾಣಕಶಿರೂರಿನ ಮಹಿಳೆಯನ್ನು ಸಹ ಅತ್ಯಂತ ಆತ್ಮೀಯವಾಗಿ ಅಭಿನಂದಿಸಿ ಕಳುಹಿಸಿಕೊಟ್ಟರು.