ಪ್ರತಿ ಹಳ್ಳಿಯೂ ಸ್ಮಾರ್ಟ್; ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಸಮರೋಪಾದಿಯಲ್ಲಿ ಅಭಿವೃದ್ಧಿ ಕೆಲಸ: ಶಾಸಕ ಕೆ.ಬಿ.ಅಶೋಕ್ ನಾಯ್ಕ

HHR WEB
Published on

ಹೊಳೆಹೊನ್ನೂರು: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಇತಿಹಾಸದಲ್ಲಿ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕೆಲಸಗಳು ಸಮರೋಪಾದಿಯಲ್ಲಿ ನಡೆದಿವೆ. ಈ ಬಾರಿ ಕ್ಷೇತ್ರದ ಜನತೆ ಅಭಿವೃದ್ಧಿಯನ್ನು ಬೆಂಬಲಿಸುತ್ತಾರೆಂಬ ವಿಶ್ವಾಸವಿದೆ ಎಂದು ಶಾಸಕ ಕೆ.ಬಿ.ಅಶೋಕ್ ನಾಯ್ಕ ಹೇಳಿದರು.

ಭಾನುವಾರ ಗ್ರಾಮಾಂತರ ಕ್ಷೇತ್ರ ಪ್ರವಾಸ ಕೈಗೊಂಡ ಅವರು ಸಮೀಪದ ಕನಸಿನಕಟ್ಟೆಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕ್ಷೇತ್ರದ ಯಾವೊಂದು ಹಳ್ಳಿಯೂ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ. ಗ್ರಾಮಾಂತರದ ಪ್ರತಿಯೊಂದು ಹಳ್ಳಿಯೂ ಸ್ಮಾರ್ಟ್ ವಿಲೇಜ್‌ಗಳಾಗಿ ಬದಲಾಗುತ್ತಿವೆ. ಈ ಬಾರಿ ಗ್ರಾಮಾಂತರದಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣ, ತಡೆಗೋಡೆಗಳು ಸೇರಿದಂತೆ ಪ್ರಮುಖ ಕಾಮಾಗಾರಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸದ್ದು ಮಾಡಿವೆ ಎಂದು ಹೇಳಿದರು.

ವಿಮಾನ ನಿಲ್ದಾಣ ಉದ್ಘಾಟನೆಗೆ ಜಿಲ್ಲಾಡಳಿತದ ನಿರೀಕ್ಷೇಗೂ ಮೀರಿ ಸಾರ್ವಜನಿಕರು ಆಗಮಿಸಿದರಿಂದ ವ್ಯವಸ್ಥೆಯಲ್ಲಿ ವ್ಯತ್ಯಾಸಗಳಾಗಿ ಅನಾನೂಕೂಲ ಉಂಟಾಯಿತು. ಆದರೂ ಧೃತಿಗೆಡದ ಜನತೆ ನಮ್ಮೊಂದಿಗೆ ಸಹಕರಿಸಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿದರು ಎಂದರು.

ಜಿಲ್ಲೆಯಲ್ಲಿ ಮಾತ್ರವಲ್ಲದೆ ಗ್ರಾಮಾಂತರದಲ್ಲೂ ಈ ಬಾರಿ ಬಿಜೆಪಿಗೆ ಗೆಲುವು ಸಿಗುವ ಆಶಾದಾಯಕ ವಾತವರಣ ನಿರ್ಮಾಣವಾಗಿದೆ. ಕ್ಷೇತ್ರದಲ್ಲಿನ ಭಾಗಶಃ ಮಹಿಳಾ ಸಂಘಟನೆಗಳು ಬಿಜೆಪಿಯನ್ನು ಬೆಂಬಲಿಸುತ್ತಿರುವುದು ಪಕ್ಷಕ್ಕೆ ಮತ್ತಷ್ಟು ಬಲ ನೀಡಿದೆ. ಚುನಾವಣೆ ಸಮೀಪಿಸುತ್ತಿರುವಾಗ ಅನ್ಯ ರಾಜಕೀಯ ಪಕ್ಷಗಳು ಕ್ಷೇತ್ರದಲ್ಲಿ ಸಕ್ರಿಯಾ ರಾಜಕಾರಣದಲ್ಲಿ ತೊಡಗಿದ್ದಾರೆ. ಸರ್ಕಸ್ ಆರಂಭಿಸಿ ಮತದಾರರಿಗೆ ಆಸೆ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಮತದಾರರು ಆಮಿಷಗಳಿಗೆ ಬಲಿಯಾಗಬಾರದು ಎಂದರು.

ಭಾನುವಾರ ಗ್ರಾಮಾಂತರದಲ್ಲಿ ಡಣಾಯಕಪುರರಿಂದ ಆರಂಭವಾದ ಅಶೋಕ್ ನಾಯ್ಕ ಕ್ಷೇತ್ರ ಪ್ರವಾಸದ ವೇಳೆ ಮಹಿಳೆಯರು ನೆಚ್ಚಿನ ಶಾಸಕರಿಗೆ ಆರತಿ ಬೆಳಗಿ ಸ್ವಾಗತಿಸಿದರು. ಶಾಸಕರ ಭೇಟಿ ನಿಮಿತ್ತ ಕೆಲವೆಡೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಸಲಾಗಿತ್ತು. ಸಿದ್ಲಿಪುರದಲ್ಲಿ ಬಿಪಿಎಲ್ ಕಾರ್ಡ್‌ಗಳು ಎಪಿಎಲ್‌ಗೆ ಪರಿವರ್ತನೆಯಾಗಿರುವುದನ್ನು ಶಾಸಕರ ಗಮನಕ್ಕೆ ತರಲಾಯಿತು. 5-6 ತಿಂಗಳಿನಿಂದ ಗ್ರಾಪಂ ಆವರಣದಲ್ಲಿರುವ ಗ್ರಾಮ ಲೆಕ್ಕಿಗರ ಕಚೇರಿ ಬಾಗಿಲು ತೆರೆದಿಲ್ಲ ಎಂದು ಆರೋಪಿಸಿದರು. ಶಾಸಕರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಇನ್ನೆರಡು ದಿನದಲ್ಲಿ ಪರಿಹಾರಿಸುವುದಾಗಿ ಭರವಸೆ ನೀಡಿದರು. ಕನಸಿನಕಟ್ಟೆಯಲ್ಲಿ ಹೊಸದಾಗಿ ಟವರ್ ಕಂಬ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಕಾಮಗಾರಿಗೆ ಸ್ಥಳ ಗುರುತಿಸುವಂತೆ ಶಾಸಕರು ಗ್ರಾಮಸ್ಥರಿಗೆ ತಿಳಿಸಿದರು. ಕ್ಷೇತ್ರ ಪ್ರವಾಸದ ವೇಳೆ ಕಾರ್ಯಕರ್ತರು ಬಿಸಿಲಿನ ಝಳ ತಳಲಾದರೆ ತಳ್ಳುಗಾಡಿಗಳಲ್ಲಿ ಮಾರುತ್ತಿದ್ದ ಐಸ್‌ಕ್ರೀಂ ಹಾಗೂ ಕಲ್ಲಂಗಡಿ ಹಣ್ಣಿನ ಮೊರೆ ಹೋದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net