

ಹುಮನಾಬಾದ್: ಜಗತ್ತಿನ ಪ್ರತಿ ಸಾಧನೆಯ ಹಿಂದೆ ಗುರುವಿನ ಶಕ್ತಿ ಅಡಗಿದೆ. ಗುರುವಿಗೆ ಸರ್ವಶ್ರೇಷ್ಠ ಸ್ಥಾನವಿದೆ ಎಂದು ಬೀದರ್‌ನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಜ್ಯೋತಿರ್ಮಯಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಬಸವರಾಜ ಪಾಟೀಲ್ ಕಲ್ಯಾಣ ಮಂಟಪದಲ್ಲಿ ಶಿಕ್ಷಣ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ಸುಭದ್ರ ಹಾಗೂ ಸಶಕ್ತ ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ವಿಶ್ವಗುರು ಭಾರತ ಆಗಲು ಜೀವಾಳ ಶಿಕ್ಷಕರು. ಶಿಕ್ಷಣದ ಜತೆಗೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಕೆಲಸ ಮಾಡಬೇಕಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್ ಮಾತನಾಡಿ, ಜನ್ಮ ನೀಡಿದ ತಾಯಿ, ಬದುಕು ಕಲಿಸಿದ ತಂದೆ, ಸಂಸ್ಕಾರ ನೀಡಿದ ಗುರು ಪೂಜ್ಯನೀಯರು. ಶಿಕ್ಷಣಕ್ಕೆ ಮೂಲ ಸೌಲಭ್ಯ ಒದಗಿಸುತ್ತಿದ್ದು, ತಾಲೂಕಿನಲ್ಲಿ ಫಲಿತಾಂಶ ಬರಲು ಶ್ರಮಿಸಬೇಕು. ಓಪಿಎಸ್ ಜಾರಿ ಕುರಿತು ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದರು.
ಸೇವಾ ನಿವೃತ್ತ ಶಿಕ್ಷಕರು, ಪ್ರತಿಶತ ಫಲಿತಾಂಶ ಬಂದ ಶಾಲೆಯ ಮುಖ್ಯಗುರುಗಳಿಗೆ, ಅಕಾಲಿಕ ನಿಧನರಾದ ಶಿಕ್ಷಕರ ಕುಟುಂಬದ ಸದಸ್ಯರನ್ನು ಸನ್ಮಾನಿಸಲಾಯಿತು.
ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್, ಡಿಡಿಪಿಐ ಸಲೀಂ ಪಾಶಾ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ನಾಗಶೆಟ್ಟಿ ಡುಮಣಿ, ಬಿಇಓ ವೆಂಕಟೇಶ ಗುಡಾಳ ಮಾತನಾಡಿದರು. ಶಿಕ್ಷಕರ ಸಂಘದ ರವೀಂದ್ರರೆಡ್ಡಿ, ಮುರುಘೇಂದ್ರ ಸಜ್ಜನಶೆಟ್ಟಿ, ಪ್ರೌಢ ಶಾಲೆ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಿಬೂಬ ಪಟೇಲ್, ಪ್ರಮುಖರಾದ ಶರದ ನಾರಾಣಪೇಟಕರ, ರಾಜಪ್ಪ ಸಿಂದೋಲï, ಗೋಪಾಲ್, ಸೂರ್ಯಕಾಂತ ಹಾವಶೆಟ್ಟಿ, ಸಾರಿಕಾ ಗಂಗಾ, ಸಿದ್ಧಲಿಂಗ ನಿರ್ಣಾ, ವೀರಂತರಡ್ಡಿ ಜಂಪಾ, ಶಶಿಧರ ಘಾವಲಕರ್, ಶಿವರಾಜ ಮೇತ್ರೆ ಇತರರಿದ್ದರು.
ಬಿಸಿ ಊಟ ಅಧಿಕಾರಿ ಸಂಜಯಕುಮಾರ ಕಾಂಗೆ ಸ್ವಾಗತಿಸಿದರು. ಶ್ರೀಕಾಂತ ಸೂಗಿ, ಮಲ್ಲಪ್ಪ ಜಿಗಜೀವಣಗಿ ನಿರೂಪಣೆ ಮಾಡಿದರು. ಬಿಆರ್‌ಸಿ ಅಧಿಕಾರಿ ಪ್ರೀತಮ ಸಿಂಗ್ ಜಾಧವ್ ವಂದಿಸಿದರು.