ಪ್ರತಿ ಶನಿವಾರ ಯೋಗ ಕಲಿಕೆ ಕಡ್ಡಾಯವಾಗಲಿ

CTD YOGA-MP---------
Published on

ಚಿತ್ರದುರ್ಗ: ಎಲ್ಲ ಶಾಲೆಗಳಲ್ಲಿ ಪ್ರತಿ ಶನಿವಾರ ಒಂದು ಗಂಟೆ ಯೋಗ ಕಲಿಕೆ ಕಡ್ಡಾಯಗೊಳಿಸುವಂತೆ ಸಂಸದ ಗೋವಿಂದ ಎಂ. ಕಾರಜೋಳ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಪಂ, ಆಯುಷ್ ಇಲಾಖೆ ಹಾಗೂ ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದರು.

ಮಕ್ಕಳಿಗೆ ಯೋಗ ಕಲಿಕೆ ಕಡ್ಡಾಯಗೊಳಿಸಿದರೆ ಚಿಕ್ಕಂದಿನಿಂದಲೇ ಅವರಲ್ಲಿ ಶಿಸ್ತು ಮೂಡುತ್ತದೆ. ಉತ್ತಮ ಆರೋಗ್ಯ ಹೊಂದಲು ಅನುಕೂಲವಾಗುತ್ತದೆ. ಜಗತ್ತಿಗೆ ಯೋಗ ಪರಿಚಯಿಸಿದ ಕೀರ್ತಿ ಭಾರತದ್ದಾಗಿದೆ ಎಂದರು.

ಮೊದಲಿಗೆ ಯೋಗ ಎನ್ನುವುದು ಒಂದು ಧರ್ಮಕ್ಕೆ ಸೀಮಿತ ಎಂಬ ಸಂಕುಚಿತ ಮನೋಭಾವವಿತ್ತು. ಆದರೆ, ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಮನವಿ ಮಾಡಿದ್ದರಿಂದ 2014ರಲ್ಲಿ ವಿಶ್ವಸಂಸ್ಥೆ ಜೂ. 21ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಿತು ಎಂದು ಹೇಳಿದರು.

ವಿಶ್ವದ190 ದೇಶಗಳಲ್ಲಿ ಯೋಗ ದಿನ ಆಚರಿಸಲಾಗುತ್ತಿದೆ. ಪ್ರಧಾನಿ ಯೋಗವನ್ನು ವಿಶ್ವದಾದ್ಯಂತ ಪಸರಿಸಲು ಪ್ರಯತ್ನಿಸುತ್ತಿದ್ದಾರೆ. ದೇಶದಲ್ಲಿ ಆಯುಷ್ ಇಲಾಖೆ ಬಲಪಡಿಸಲಾಗಿದೆ ಎಂದು ತಿಳಿಸಿದರು.

ಎಂಎಲ್‌ಸಿ ಕೆ.ಎಸ್. ನವೀನ್ ಮಾತನಾಡಿ, ಯೋಗದಿಂದ ಸಕಾರಾತ್ಮಕ ಚಿಂತನೆ, ಸದೃಢ ಮನೋಭಾವ ಬೆಳೆಯುತ್ತದೆ. ಯೋಗಾಭ್ಯಾಸ ಒಂದು ದಿನಕ್ಕೆ ಸೀಮಿತವಾಗಬಾರದು. ಯೋಗ ದೇಶದ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ತಿಳಿಸಿದರು.

ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಉದ್ಯಾನಗಳಲ್ಲಿ ಯೋಗಕ್ಕೆ ಪ್ರತ್ಯೇಕ ವೇದಿಕೆ ನಿರ್ಮಿಸಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ತಾಜ್‌ಪೀರ್ ಹೇಳಿದರು.

ಈಗಾಗಲೇ ನಗರದ ಪ್ರಮುಖ ಉದ್ಯಾನಗಳಲ್ಲಿ ವೇದಿಕೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ನಾಡಿನೆಲ್ಲೆಡೆ ಯೋಗ ಪರಿಚಯಿಸಲು ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮೀಜಿ ಅವರ ಕೊಡುಗೆ ಮಹತ್ವದಾಗಿದೆ ಎಂದರು.

-

ಸಾವಿರಾರು ಜನರಿಂದ ಯೋಗಭ್ಯಾಸ

ಈ ಬಾರಿಯ ಘೋಷವಾಕ್ಯ‘ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ’ ಯೋಗ ಎಂಬುದನ್ನು ಸಾರುವ ನಿಟ್ಟಿನಲ್ಲಿ ವಿವಿಧ ಯೋಗ ಸಂಸ್ಥೆಗಳಿಂದ ಆಗಮಿಸಿದ ಸಾವಿರಾರು ಯೋಗ ಪಟುಗಳು 45 ನಿಮಿಷಗಳ ಕಾಲ ಸಾಮೂಹಿಕ ಯೋಗಾಭ್ಯಾಸ ಮಾಡಿದರು. ಯೋಗ ಶಿಕ್ಷಕಿ ಹೇಮಾವತಿ ಯೋಗಾಸನಗಳನ್ನು ಬೋಧಿಸಿದರು. ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಶ್ಮಿ ಅವರು ಧ್ಯಾನ ಮತ್ತು ಯೋಗ ಸಂಕಲ್ಪ ಬೋಧಿಸಿದರು.

ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಜಿಪಂ ಉಪಕಾರ್ಯದರ್ಶಿ ರಂಗಸ್ವಾಮಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲಾತೇಶ್ ಮುದ್ದಜ್ಜಿ, ತಾಜ್‌ಪೀರ್, ಯೋಗಾಚಾರ್ಯ ಎಲ್.ಎಸ್. ಚಿನ್ಮಯಾನಂದ ಮತ್ತಿತರರು ಯೋಗಭ್ಯಾಸದಲ್ಲಿ ಪಾಲ್ಗೊಂಡಿದ್ದರು.

ಚಿತ್ರದುರ್ಗ ಅಮೃತ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳು ವಿಶೇಷ ಯೋಗ ನೃತ್ಯ ಪ್ರದರ್ಶಿಸಿದರು. ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ್ ನಾಗಸಮುದ್ರ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲೆಯ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳು, ವಿವಿಧ ಯೋಗ ಸಂಸ್ಥೆಗಳ ಮುಖ್ಯಸ್ಥರು, ಸದಸ್ಯರು ಪಾಲ್ಗೊಂಡಿದ್ದರು.

ಆಯುಷ್ ವೈದ್ಯಾಧಿಕಾರಿ ಡಾ. ಶಿವಕುಮಾರ್ ನಿರೂಪಿಸಿದರು. ಆಯುಷ್ ವೈದ್ಯಾಧಿಕಾರಿ ನಾರದಮುನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈದ್ಯಾಧಿಕಾರಿ ಮಂಜುಳಾ ಸ್ವಾಗತಿಸಿ, ವೈದ್ಯಾಧಿಕಾರಿ ಪ್ರಶಾಂತ್ ವಂದಿಸಿದರು.

ಆರೋಗ್ಯಕ್ಕೆ ಯೋಗ ಸಹಕಾರಿ

ಯೋಗಶಾಸ್ತ್ರದ ನಿರಂತರ ಅನುಷ್ಠಾನದಿಂದ ಜೀವನೋತ್ಸಾಹ, ಸಾಹಸ, ಧೈರ್ಯ, ಬುದ್ಧಿಶಕ್ತಿ, ಪರಾಕ್ರಮಗಳು ವೃದ್ಧಿಸುತ್ತವೆ ಎಂದು ಭೋವಿ ಗುರುಪೀಠದ ಶ್ರೀ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

ಎಸ್‌ಜೆಎಸ್ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಶ್ರೀ ಗುರುಪೀಠದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಯೋಗ ದಿನಾಚರಣೆ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಆಸನಗಳ ಅಭ್ಯಾಸವೊಂದೇ ಯೋಗವಲ್ಲ. ದೇಹದಲ್ಲಿರುವ ಸಪ್ತಧಾತುಗಳ ಅಸಮತೋಲನ ಹೋಗಲಾಡಿಸಿ ದೇಹ, ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳುವುದಾಗಿದೆ ಎಂದರು.

ಪ್ರಾಣಾಯಾಮ ಚಂಚಲ ಚಿತ್ತವನ್ನು ನಿಯಂತ್ರಿಸುತ್ತದೆ. ಯೋಗ ಒತ್ತಡ ಹತೋಟಿ, ಆಲೋಚನಾ ಸಾಮರ್ಥ್ಯ, ಆತ್ಮ ವಿಶ್ವಾಸ ಮತ್ತು ಏಕಾಗ್ರತೆ ಹೆಚ್ಚಿಸುತ್ತದೆ. ಆಹಾರ ಮತ್ತು ನಿದ್ರೆಗಳಂತೆ ನಿತ್ಯ ಯೋಗಾಭ್ಯಾಸಕ್ಕೂ ನಿಗದಿತ ಸಮಯ ಮೀಸಲಿಡುವುದು ಅಗತ್ಯ ಎಂದರು.

ರಾಮಕೃಷ್ಣ ಪ್ರೌಢಶಾಲೆ ಮುಖ್ಯಶಿಕ್ಷಕ ಶ್ರೀಧರ್, ಎಸ್‌ಜೆಎಸ್ ಆಂಗ್ಲ ಮಾಧ್ಯಮ ಶಾಲೆ ಮುಖ್ಯ ಶಿಕ್ಷಕ ದಿನೇಶ, ಎಸ್‌ಜೆಎಸ್ ಸಮೂಹ ಸಂಸ್ಥೆಗಳ ಶಿಕ್ಷಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಇದ್ದರು.

---

ಅನುಪಮಾ ಶಾಲೆಯಲ್ಲಿ ಯೋಗ ದಿನಾಚರಣೆ

ಚಿತ್ರದುರ್ಗ: ಜೋಗಿಮಟ್ಟಿ ರಸ್ತೆಯ ಅನುಪಮಾ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ 11ನೇ ವಿಶ್ವ ಯೋಗ ದಿನಾಚರಣೆಯನ್ನು ಶನಿವಾರ ವಿಶೇಷವಾಗಿ ಆಚರಿಸಲಾಯಿತು.

ಯೋಗ ಶಿಕ್ಷಕರ ನೇತೃತ್ವದಲ್ಲಿ ಶಾಲೆಯ 1ರಿಂದ 10ನೇ ತರಗತಿಯ 300 ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಸಾಮೂಹಿಕವಾಗಿ ಯೋಗ ಪ್ರದರ್ಶಿಸಿದರು.

ಶಾಲೆಯ ಅಧ್ಯಕ್ಷ ಎಸ್. ಭಾಸ್ಕರ್, ಕಾರ್ಯದರ್ಶಿ ಎಸ್.ಬಿ. ರಕ್ಷಣ್, ಪ್ರಾಚಾರ್ಯ ಸಿ.ಡಿ. ಸಂಪತ್‌ಕುಮಾರ್, ಮುಖ್ಯ ಶಿಕ್ಷಕರು, ಶಿಕ್ಷಕ-ಶಿಕ್ಷಕಿಯರು ಇತರರಿದ್ದರು.

-----------------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net