ಪ್ರತಿ ವಿದ್ಯಾರ್ಥಿಗೂ ಮಾನವೀಯ ಮೌಲ್ಯ ಅವಶ್ಯ, ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಮತ

15 Nela ph 01 Udgatane
Published on

ನೆಲಮಂಗಲ: ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.

ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಬಸವೇಶ್ವರ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.

ಪ್ರತಿಯೊಬ್ಬರ ಜೀವನಶೈಲಿಯಲ್ಲಿ ಮಾಡಿಕೊಳ್ಳುವ ಸಣ್ಣ ಬದಲಾವಣೆಗಳು ಭವಿಷ್ಯದಲ್ಲಿ ದೊಡ್ಡ ಪರಿವರ್ತನೆಯನ್ನೇ ಮಾಡಬಲ್ಲವು. ವಿದ್ಯಾರ್ಥಿಗಳು ಕಲಿಕೆಯನ್ನು ಪರೀಕ್ಷೆಗಷ್ಟೇ ಸೀಮಿತಗೊಳಿಸದೆ, ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದರು.

ಶಿಗ್ಗಾವಿ ಜಾನಪದ ವಿಶ್ವವಿದ್ಯಾಲಯದ ಜಾನಪದ ನಿಘಂಟು ಯೋಜನಾ ಕ್ಷೇತ್ರದ ಪ್ರಾಧ್ಯಾಪಕಿ ಮಂಜುಳಾ ಶಿವಾನಂದ ಮಾತನಾಡಿ, ಜಾನಪದದ ಹುಟ್ಟು, ಬೆಳವಣಿಗೆ ಹೆಣ್ಣುಮಕ್ಕಳು ಕಟ್ಟಿರುವ ಹಾಡುಗಳು ಜನಪ್ರಿಯವಾಗಿವೆ. ಮಗುವಿನ ಜನನದಿಂದ ಮರಣದವರೆಗೂ ಜನಪದರು ಹಾಗೂ ಹಿರಿಯರು ಲಕ್ಷಾಂತರ ಜಾನಪದ ಹಾಡುಗಳನ್ನು ಕಟ್ಟಿಕೊಟ್ಟಿದ್ದಾರೆ. ಹೆಣ್ಣು ಮನಸ್ಸು ಮಾಡಿದರೆ ಅಡುಗೆಮನೆಯಿಂದಲೇ ಅದ್ಭುತ ಬದಲಾವಣೆಗಳೆಲ್ಲವೂ ಆಗಬಹುದು ಎಂದು ಹೇಳಿದರು.

ಪ್ರಥಮ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ 16 ವಿದ್ಯಾರ್ಥಿನಿಯರಿಗೆ ಪ್ರಮಾಣಪತ್ರವನ್ನು ಕೊಡಲಾಯಿತು. ತುಮಕೂರು ಶ್ರೀ ಸಿದ್ಧಗಂಗಾ ಮಹಿಳಾ ಪದವಿ ಕಾಲೇಜು ಕನ್ನಡ ಪ್ರಾಧ್ಯಾಪಕ ಬಾಲಚಂದ್ರ, ಉಪನ್ಯಾಸಕರಾದ ಪ್ರದೀಪ್‌ಕುಮಾರ್, ಅಕ್ಕಮಹಾದೇವಿ, ಜಯಶ್ರೀ, ರೇಖಾ, ರಮ್ಯಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net