ಪ್ರತಿ ರೈತನಿಗೂ ಬೆಳೆ ಸಾಲ : ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ

2
Published on

ಮಾಗಡಿ: ರಾಜ್ಯದ ಪ್ರತಿ ರೈತನಿಗೂ ಬೆಳೆ ಸಾಲ ನೀಡಲಾಗುವುದು. ಈ ಸೌಲಭ್ಯದಿಂದ ಯಾರೂ ವಂಚಿತರಾಗಬಾರದು ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದು ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.

ತಾಲೂಕಿನ ಆಗಲಕೋಟೆ ಹ್ಯಾಂಡ್ ಪೋಸ್ಟ್ ಬಳಿ ಬಿಡಿಸಿಸಿ ಬ್ಯಾಂಕ್ ಶಾಖೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ 26 ಲಕ್ಷ ರೈತರಿಗೆ 20,810 ಕೋಟಿ ರೂ. ಸಾಲ ನೀಡುವ ಗುರಿ ಹೊಂದಲಾಗಿದ್ದು, ಈಗಾಗಲೇ 20 ಲಕ್ಷ ರೈತರಿಗೆ 14 ಸಾವಿರ ಕೋಟಿ ರೂ. ಸಾಲ ನೀಡಲು ಚಾಲನೆ ನೀಡಲಾಗಿದೆ. ಉಳಿದ ರೈತರಿಗೆ ಮಾರ್ಚ್ 25ರ ಒಳಗೆ ಸಾಲ ನೀಡಲು ಬ್ಯಾಂಕ್ ಅಧ್ಯಕ್ಷರಿಗೆ ಸೂಚಿಸಲಾಗಿದೆ. ಸಾಲ ನೀಡಿಕೆಯಲ್ಲಿ ತಾರತಮ್ಯ ಮಾಡದಂತೆ ನಿರ್ದೇಶಿಸಲಾಗಿದೆ ಎಂದರು.

ತಾರತಮ್ಯ ಮಾಡಿದವರಿಗೆ ನೋಟಿಸ್

ರಾಜ್ಯದ 21 ಬಿಡಿಸಿಸಿ ಬ್ಯಾಂಕ್‌ಗಳು ಸಾಲ ನೀಡಲು ಮುಂದೆ ಬಂದಿದ್ದು, ತಾಲೂಕಿಗೆ 34 ಕೋಟಿ ರೂ. ನೀಡಲು ಮನವಿ ಮಾಡಲಾಗಿದೆ. ಸಾಲ ಪಡೆದ ರೈತರು ಹಾಗೂ ಇತರ ಮಾಹಿತಿಗಾಗಿ ಒಂದೇ ಸಾಫ್ಟ್‌ವೇರ್ ಅಳವಡಿಸಲು ಕ್ರಮ ಕೈಗೊಳ್ಳಲಾಗಿದ್ದು, 30.84 ಲಕ್ಷ ರೈತರ ಮಾಹಿತಿ ಒಂದೇ ಸಮಯದಲ್ಲಿ ಸಿಗಲಿದೆ. 120 ಕಾರ್ಯದರ್ಶಿಗಳು ರೈತರಿಗೆ ಮೋಸ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈಗಾಗಲೇ 2 ಜಿಲ್ಲೆಗಳಲ್ಲಿ ತಾರತಮ್ಯ ಮಾಡಿದವರ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ ಎಂದರು.

ಎಚ್.ಎಂ,ರೇವಣ್ಣ, ಸಿ.ಎಂ.ಲಿಂಗಪ್ಪ ಅವರು ಎಪಿಎಂಸಿ ಮಾರುಕಟ್ಟೆಗೆ ಜಾಗ ಗುರುತಿಸಿದರೆ ಅನುದಾನ ಬಿಡುಗಡೆ ಮತ್ತು ಪಿಎಲ್‌ಡಿ ಬ್ಯಾಂಕ್ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ಇನ್ನೆರಡು ದಿನಗಳಲ್ಲಿ ಸಣ್ಣ ಮತ್ತು ದೊಡ್ಡ ಇಳುವರಿದಾರರಿಂದ ರಾಗಿ ಖರೀದಿಸಲು ಮುಖ್ಯಮಂತ್ರಿಗಳು ೋಷಣೆ ಮಾಡಲಿದ್ದಾರೆ. ರಾಗಿ, ಭತ್ತ, ಜೋಳಕ್ಕೂ ಬೆಂಬಲ ಬೆಲೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿ: ಶಾಸಕ ಎ. ಮಂಜುನಾಥ್ ಮಾತನಾಡಿ, ಬಿಡಿಸಿಸಿ ಬ್ಯಾಂಕ್ ಆರಂಭದಿಂದ ಈ ಭಾಗದ ಹೈನುಗಾರರಿಗೆ ಅನುಕೂಲವಾಗಲಿದೆ. ಕೂಟಗಲ್ಲು, ತಿಪ್ಪಸಂದ್ರಬಳಿ ಬ್ಯಾಂಕ್ ತೆರೆಯುವಂತೆ, ಬಿಡದಿ ಬಳಿ ಪಶು ಡಯಾಲಿಸ್ ಸೆಂಟರ್, ಪಿಎಲ್‌ಡಿ ಬ್ಯಾಂಕ್ ಕಟ್ಟಡ ನಿರ್ಮಿಸಲು ಜಾಗ ಗುರುತಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲು ಸಚಿವರು ಮುಂದಾಗಬೇಕು ಎಂದು ಮನವಿ ಮಾಡಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೆಶಕ ಎಚ್.ಎನ್. ಅಶೋಕ್ ಮಾತನಾಡಿ, ವಿಎಸ್‌ಎಸ್‌ಎನ್‌ಗಳ ಕಟ್ಟಡ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ, ರಾಗಿ ಖರೀದಿ ಗೋದಾಮು ಕಟ್ಟಡ ನಿರ್ಮಾಣ ಮಾಡಲು ಗೋಮಾಳ ಜಮೀನು ಮಂಜೂರು, ಬಿಡಿಸಿಸಿ ಬ್ಯಾಂಕ್‌ನಲ್ಲಿ ಹಾಲು ಉತ್ಪಾದಕರ ಖಾತೆ ಪ್ರಾರಂಭಿಸಲು ಸಚಿವರು ಸಹಕಾರ ನೀಡುವಂತೆ ಮನವಿ ಮಾಡಿದರು.

ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಹನುಮಂತಯ್ಯ, ಬೆಂಗಳೂರು ಡೇರಿ ಅಧ್ಯಕ್ಷ ನರಸಿಂಹಮೂರ್ತಿ, ಎಪಿಎಂಸಿ ಜಿಲ್ಲಾಧ್ಯಕ್ಷ ಸಿಎಂ. ಮಾರೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರು, ದಿಶಾ ಸಮಿತಿ ಸದಸ್ಯ ಜೆಪಿ.ಚಂದ್ರೇಗೌಡ, ತಾ.ಪಂ. ಮಾಜಿ ಸದಸ್ಯೆ ಸುಮಾ ರಮೇಶ್, ಕಾಂತರಾಜು, ರತ್ನಮ್ಮ ಶ್ರೀನಿವಾಸ್, ಜಿ.ಪಂ.ಮಾಜಿ ಸದಸ್ಯೆ ಕಲ್ಪನಾ ಶಿವಣ್ಣ ಇತರರು ಇದ್ದರು

ಪತ್ರಕರ್ತರಿಗೆ ಅಗೌರವ

ಬ್ಯಾಂಕ್ ಉದ್ಘಾಟನೆ ಕಾರ್ಯಕ್ರಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದರಿಂದ ಕಲ್ಯಾಣ ಮಂಟಪ ಜನರಿಂದ ತುಂಬಿತ್ತು. ಸುದ್ದಿ ಮಾಡಲು ತೆರಳಿದ ಪತ್ರಕರ್ತರಿಗೆ ಆಸನದ ವ್ಯವಸ್ಥೆ ಇಲ್ಲದೆ ನಿಂತುಕೊಳ್ಳಬೇಕಾಯಿತು. ಈ ವೇಳೆ ಏಕಾಏಕಿ ತಳ್ಳಾಟ, ನೂಕಾಟ ಉಂಟಾಗಿ ಪೊಲೀಸರು ಪತ್ರಕರ್ತರನ್ನು ಅಗೌರವವಾಗಿ ನಡೆಸಿಕೊಂಡರೆಂದು ಪತ್ರಕರ್ತರೆಲ್ಲರೂ ಸಭೆಯಿಂದ ಹೊರನಡೆಯಲು ಮುಂದಾದರು. ಈ ವೇಳೆ ಮಾಜಿ ಸಚಿವ ಎಚ್.ಎಂ.ರೇವಣ್ಣ ಪತ್ರಕರ್ತರ ಮನವೊಲಿಸಿದರು.

ಶಾಸಕರಿಗೆ ಪ್ರಥಮ ಮರ್ಯಾದೆ: ಕಾರ್ಯಕ್ರಮದ ಬ್ಯಾನರ್‌ನಲ್ಲಿ ತಮ್ಮ ಚಿತ್ರ ಇಲ್ಲದ್ದಕ್ಕೆ ಶಾಸಕ ಎ. ಮಂಜುನಾಥ್ ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಸ್‌ಟಿಎಸ್, ಯಾವುದೇ ರಾಜಕೀಯವಿಲ್ಲದೆ ಸರ್ಕಾರದ ಪ್ರತಿನಿಧಿಯಾಗಿ ಬಂದಿದ್ದೇನೆ. ಪ್ರೋಟೋಕಾಲ್ ಅನುಸರಿಸಿ ಈ ಭಾಗದ ರಾಜಕೀಯ ವ್ಯಕ್ತಿಗಳ ಪೋಟೋಗಳನ್ನು ಹಾಕಬೇಕು. ಯಾವೊಬ್ಬ ಶಾಸಕರಿಗೂ ಅಪಚಾರವಾಗಬಾರದು. ಇದನ್ನು ಸರ್ಕಾರ ಸಹಿಸುವುದಿಲ್ಲ. ಎ. ಮಂಜುನಾಥ್ ಆ್ಯಕ್ಟಿವ್ ಶಾಸಕರಾಗಿದ್ದಾರೆ ಎಂದರು.

ಮೇಲ್ಸೇತುವೆ ಬಗ್ಗೆ ಸಿಎಂ ಬಳಿ ಪ್ರಸ್ತಾಪ: ಮಾಗಡಿಯಿಂದ ಸೋಮವಾರಪೇಟೆಯವರೆಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಸುಮನಹಳ್ಳಿಯಿಂದ ನೈಸ್ ರಸ್ತೆಯವರೆಗೆ ಮೇಲ್ಸೇತುವೆ ನಿರ್ಮಾಣ ಮಾಡಲು ಸಿಎಂ ಗಮನಕ್ಕೆ ತರಲಾಗಿದೆ. ಇದರಿಂದ ಮಾಗಡಿ ಜನರಿಗೆ ಅನುಕೂಲವಾಗಲಿದೆ. ತಿಪ್ಪಗೊಂಡನಹಳ್ಳಿ ಜಲಾಶಯ ಸೇರುತ್ತಿರುವ ಕಲುಷಿತ ನೀರು ತಡೆಯಲಾಗುವುದು. ಈ ಜಲಾಶಯಕ್ಕೆ ಎತ್ತಿನಹೊಳೆಯಿಂದ ನೀರು ತುಂಬಿಸಲು ಸೆಪ್ಟೆಂಬರ್ ಒಳಗೆ ಚಾಲನೆ ನೀಡಲಾಗುವುದು ಎಂದು ಸಚಿವ ಸೋಮಶೇಖರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net