

ಮುಳಗುಂದ:ನಾವು ಆರೋಗ್ಯವಂತರಾಗಿರಲು ವೈಯಕ್ತಿಕ ಹಾಗೂ ಪರಿಸರ ಶುದ್ಧತೆ ಅವಶ್ಯಕ. ಬಯಲು ಶೌಚದಿಂದ ಹಬ್ಬುವ ರೋಗಗಳೇ ಹೆಚ್ಚು. ಇದರಿಂದ ಮುಕ್ತಿ ಪಡೆಯಲು ಶೌಚಗೃಹ ನಿರ್ಮಾಣ ಮಾಡಿಕೊಳ್ಳಬೇಕು ಎಂದು ವೈದ್ಯ ಡಾ. ಎಸ್.ಸಿ. ಚವಡಿ ಹೇಳಿದರು.
ಪಟ್ಟಣದ ರೇಣುಕಾ ದೇವಸ್ಥಾನದ ಬಯಲು ಜಾಗದಲ್ಲಿ ನೆಹರು ಯುವ ಕೇಂದ್ರ ಗದಗ (ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ), ಭಗತ್ಸಿಂಗ್ ಯುವಕ ಮಂಡಳ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ, ಪತಂಜಲಿ ಯೋಗ ಸಮಿತಿ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಹಾಗೂ ಶ್ರಮದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಪ್ರತಿಯೊಬ್ಬರೂ ಸಮತೋಲನ ಆಹಾರ ಸೇವಿಸಿ, ಶುದ್ಧ ನೀರು ಕುಡಿಯಬೇಕು. ಅಲ್ಲದೆ, ಪ್ರತಿಯೊಂದು ಮನೆಯಲ್ಲೂ ಕಡ್ಡಾಯವಾಗಿ ವೈಯಕ್ತಿಕ ಶೌಚಗೃಹ ಹೊಂದಿರಬೇಕು. ಇದರಿಂದ ಸಾಕಷ್ಟು ರೋಗಗಳು ಬಾರದಂತೆ ತಡೆಗಟ್ಟಬಹುದು ಎಂದು ತಿಳಿಸಿದರು.
ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ಶಿವಾನಿ ಮಾತನಾಡಿ, ಮನಸ್ಸು, ಮನೆ, ಗ್ರಾಮ ಸ್ವಚ್ಛವಾಗಿದ್ದಾಗ ಪ್ರತಿಯೊಬ್ಬರಲ್ಲಿ ಶಾಂತಿ ನೆಲೆಸುತ್ತದೆ. ವಾತಾವರಣ ಅಶುದ್ಧವಾದರೆ ಮನಸ್ಸು ಅಶುದ್ಧವಾಗುತ್ತದೆ. ಇಂತಹ ಪರಿಸರದ ಸ್ವಚ್ಛತೆಗೆ ಯುವಕರು ಮುಂದೆ ಬರಬೇಕಿದೆ ಎಂದರು.
ಪಪಂ ಸದಸ್ಯೆ ಪಾರವ್ವ ಅಳ್ಳಣ್ಣವರ, ಲಕ್ಷ್ಮೀ ಮದ್ದೀನ, ಮಹಾಂತೇಶ ಕಳ್ಳಿಮನಿ, ಅಕ್ಷಯ ಬೆಂಕಿ, ಲಕ್ಷ್ಮವ್ವ ಭಜಂತ್ರಿ, ಬಸವರಾಜ ವಿಜಾಪೂರ, ಲಲಿತಾ ಅಳ್ಳಣ್ಣವರ, ಸಂತೋಷ ಕೊಟಗಿ, ಪ್ರವೀಣ ಶಿರಹಟ್ಟಿ, ನಾಗಪ್ಪ ಅಳ್ಳಣ್ಣವರ, ಪ್ರಕಾಶ ಮದ್ದಿನ ಕಾರ್ಯಕ್ರಮ ನಿರ್ವಹಿಸಿದರು.
EndFragment