

ಹುಮನಾಬಾದ್: ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಜಲ್‌ಜೀವನ್ ಮಿಷನ್ ಯೋಜನೆಯ ಕಾಮಗಾರಿ ಗುಣಮಟ್ಟದ ಜತೆಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲï ಹೇಳಿದರು. ಗಡವಂತಿ ಗ್ರಾಮದಲ್ಲಿ ಬುಧವಾರ ಜಲ್ ಜೀವನ್ ಮೀಷನ್ ಯೋಜನೆ ಅಡಿ ೮೭೯ ಮನೆಗೆ ಶುದ್ಧ ನೀರು ವಿತರಿಸುವ ಸುಮಾರು ೨.೮೯ ಕೋಟಿ ರೂ. ಮೊತ್ತದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಮೀಣ ಭಾಗದ ಜನ ಶುದ್ಧ ನೀರು ಸೇವಿಸಿ ಆರೋಗ್ಯ ಕಾಪಾಡುವ ಯೋಜನೆ ಜಾರಿಗೆ ತರಲಾಗಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಗ್ರಾಮದ ಪ್ರತಿ ಮನೆಗೆ ನಳಗಳ ಜೋಡಣೆ ಶೀಘ್ರ ನಡೆಯಬೇಕು. ಗುಣಮಟ್ಟದಿಂದ ಕಾಮಗಾರಿ ಮಾಡಬೇಕು ಎಂದು ಸೂಚಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಂಚಶೀಲಾ ಹೆಗ್ಗಣಿ, ಉಪಾಧ್ಯಕ್ಷ ಮಾಣಿಕ ನಿಮಾಣಿ, ಗ್ರಾಮ ಪಂಚಾಯಿತಿ ಸದಸ್ಯರಾದ ವಿನೋದ ನಿಲಮನಳ್ಳಿ, ದಿಲೀಪ ಮರಪಳ್ಳಿ, ಪ್ರಮುಖರಾದ ಬಸವರಾಜ ಪಾಟೀಲ್, ಅಶೋಕ ವಿಭೂತಿ, ಮಲ್ಲಿಕಾರ್ಜುನ ಕುಂಬಾರ, ಸಂತೋಷ ಪಾಟೀಲ್, ಮಲ್ಲಿಕಾರ್ಜುನ ಸೀಗಿ, ರವಿ ಹೊಸಳ್ಳಿ, ಮಲ್ಲು ಕಿಟ್ಟಾ ಇತರರಿದ್ದರು.